ನವದೆಹಲಿ: ನರೇಂದ್ರ ಮೋದಿ ಪೊರಕೆ ಹಿಡಿದು ನೆಲ ಗುಡಿಸುತ್ತಿರುವ ಫೋಟೋ ಕಳೆದ ಲೋಕಸಭಾ ಚುನಾವಣೆಯ ವೇಳೆ ಅತೀ ಹೆಚ್ಚು ಚರ್ಚೆಗೆ ಗ್ರಾಸವಾದ ಫೋಟೋ ಆಗಿತ್ತು. ಚುನಾವಣಾ ಪ್ರಚಾರದ ಭಾಗವಾಗಿ ಈ ಚಿತ್ರವನ್ನು ಬಿಜೆಪಿ ಸೋಷ್ಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿತ್ತು. ಆದರೆ ಆ ಚಿತ್ರ ಎಲ್ಲಿಂದ ಬಂತು? ಅದನ್ನು ಸೋಷ್ಯಲ್ ಮೀಡಿಯಾದಲ್ಲಿ ಹರಿಯ ಬಿಟ್ಟಿದ್ದು ಯಾರು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಗಳಿಲ್ಲ.
1988ರಲ್ಲಿ ಆರೆಸ್ಸೆಸ್ ಕಾರ್ಯಕರ್ತನಾಗಿದ್ದಾಗ ತೆಗೆದ ಮೋದಿಯವರ ಅಪರೂಪ ಫೋಟೋ ಇದು ಎಂಬ ಅಡಿಟಿಪ್ಪಣಿಯೊಂದಿಗೆ ಈ ಫೋಟೋ ಸಂಚಲನ ಸೃಷ್ಟಿಸಿತ್ತು. ಇದು ನಕಲಿ ಚಿತ್ರ ಎಂದು ಸಾಕಷ್ಟು ಜನರು ವಾದಿಸಿದ್ದರು. ಈ ಫೋಟೋದಲ್ಲಿರುವುದು ಮೋದಿಯಲ್ಲ, ಇದು ಫೋಟೋಶಾಪ್ ಮಾಡಿದ ಚಿತ್ರ ಎಂದು ಸೋಷ್ಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಗಳು ನಡೆದಿದ್ದವು.
ಈ ನಡುವೆ ಮೋದಿ ಬಹುಮತದಿಂದ ಗೆದ್ದು ಅಧಿಕಾರಕ್ಕೆ ಏರಿದ್ದೂ ಆಯ್ತು. ಇದಾದನಂತರವೂ ವಾಟ್ಸಾಪ್ ಮತ್ತು ಫೇಸ್ಬುಕ್ ನಲ್ಲಿ ಈ ಫೋಟೋ ಹರಿದಾಡುತ್ತಲೇ ಇದೆ. ಮೋದಿ ಅಧಿಕಾರಕ್ಕೇರಿ ವರ್ಷ ಕಳೆದ ನಂತರ ಇದೀಗ ಈ ಫೋಟೋ ನಕಲಿ ಎಂಬುದು ಸಾಬೀತಾಗಿದೆ.
ಮೋದಿ ನೆಲ ಗುಡಿಸುತ್ತಿರುವ ಈ ಫೋಟೋ ಮೂಲಕ ಮೋದಿ ಒಬ್ಬ ಸಾಮಾನ್ಯ ವ್ಯಕ್ತಿ ಎಂದು ಸಾರಲು ಬಿಜೆಪಿಗೆ ಸಾಧ್ಯವಾಗಿತ್ತು. ಆದರೆ ಅಹಮ್ಮದಾಬಾದ್ ಮೂಲದ ಕಾರ್ಯಕರ್ತನೊಬ್ಬ ಈ ಬಗ್ಗೆ ಆರ್ಟಿಐ ಸಲ್ಲಿಸಿ ಸತ್ಯ ಕಂಡುಕೊಂಡಿದ್ದಾನೆ.
ಕಾರ್ಯಕರ್ತನ ಪ್ರಶ್ನೆಗೆ ಉತ್ತರಿಸಿದ ಆರ್ಟಿಐ, ಚಿತ್ರದಲ್ಲಿರುವ ವ್ಯಕ್ತಿ ಮೋದಿ ಅಲ್ಲ, ಅದು ಫೋಟೋಶಾಪ್ ಮಾಡಿದ ಫೋಟೋ ಎಂದು ಉತ್ತರಿಸಿದೆ.