ಪ್ರಧಾನ ಸುದ್ದಿ

ರೋಹಿತ್ ವೇಮುಲಾ ಆತ್ಮಹತ್ಯೆ ಪತ್ರ ವಿಧಿವಿಜ್ಞಾನ ಪರೀಕ್ಷೆಗೆ ರವಾನೆ

Lingaraj Badiger
ಹೈದರಾಬಾದ್: ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಅವರು ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಪತ್ರವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರೋಹಿತ್ ಆತ್ಮಹತ್ಯೆ ಪ್ರಕರಣ ತೀವ್ರ ಕೋಲಾಹಲ ಉಂಟು ಮಾಡಿರುವುದರ ನಡುವೆಯೇ ಅವರು ಬರೆದಿಟ್ಟಿರುವ ಡೆತ್ ನೋಟ್ ನಲ್ಲಿ ಒಂದು ಪೂರ್ತಿ ಪ್ಯಾರಾವನ್ನು ಹೊಡೆದುಹಾಕಿರುವುದು ಕಂಡು ಬಂದಿದ್ದು, ಈ ಕೆಲಸವನ್ನು ಮಾಡಿದವರು ಯಾರು ಎಂದು ತಜ್ಞರು ಇದೀಗ ತನಿಖೆ ಆರಂಭಿಸಿದ್ದಾರೆ. ತನಿಖೆಯ ಭಾಗವಾಗಿ ಡೆತ್ ನೋಟ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.
ರೋಹಿತ್ ನೇಣುಹಾಕಿಕೊಂಡಿದ್ದ ಹೈದರಾಬಾದ್ ಸೆಂಟ್ರಲ್ ವಿಶ್ವವಿದ್ಯಾಲಯದ ವಸತಿ ನಿಲಯದ ಕೊಠಡಿಯಿಂದ ಈ ಪತ್ರವನ್ನು ವಶಪಡಿಸಿಕೊಳ್ಳಲಾಗಿದ್ದು, ಇದೀಗ ಅದನ್ನು ವಿಧಿವಿಜ್ಞಾನ ವಿಶ್ಲೇಷಣೆಗೆ ಕಳುಹಿಸಲಾಗಿದೆ.
ಹೊಡೆದು ಹಾಕಲಾಗಿರುವ ಪ್ಯಾರಾದ ಕೆಳಭಾಗದಲ್ಲಿ ‘ನಾನೇ ಈ ಪದಗಳನ್ನು ಹೊಡೆದುಹಾಕಿದ್ದೇನೆ’ ಎಂಬುದಾಗಿ ಬರೆಯಲಾಗಿದ್ದು ಕೆಳಗೆ ರೋಹಿತ್ ಸಹಿ ಕಾಣುತ್ತಿರುವುದರಿಂದ ರೋಹಿತ್ ಅವರೇ ಈ ಪ್ಯಾರಾವನ್ನು ಹೊಡೆದುಹಾಕಿರುವ ಸಾಧ್ಯತೆ ಇದೆ. ಆದರೆ ಹೊಡೆದು ಹಾಕಿದ್ದೇಕೆ, ಅದರಲ್ಲಿ ಏನು ಬರೆಯಲಾಗಿತ್ತು ಎಂಬುದು ನಿಗೂಢವಾಗಿದೆ. ತಮ್ಮದೇ ಸಂಘಟನೆಯಾದ ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಶನ್ ಬಗ್ಗೆ ರೋಹಿತ್​ಗೆ ಭ್ರಮನಿರಸನವಾಗಿದ್ದ ಬಗ್ಗೆ ಈ ಪ್ಯಾರಾದಲ್ಲಿ ಇದ್ದಿರಬಹುದು ಎಂಬ ಊಹಾಪೋಹಗಳು ಹರಡಿವೆ. ಏನಿದ್ದರೂ ವಿಧಿವಿಜ್ಞಾನ ಪ್ರಯೋಗಾಲಯದಿಂದ ವರದಿ ಬರಲು ಕೆಲವು ದಿನಗಳು ಬೇಕಾಗಬಹುದು, ಬಂದ ಬಳಿಕವಷ್ಟೇ ಈ ನಿಗೂಢ ಒಡೆಯಬಹುದು ಎಂದು ವರದಿಗಳು ಹೇಳಿವೆ.
SCROLL FOR NEXT