ಹೈದರಬಾದ್: ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ವಿಚಾರವಾಗಿ ನಡೆಯುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡ ಬೆನ್ನಲ್ಲೇ, ವಿವಿಯ ಮಧ್ಯಂತರ ಕುಲಪತಿಯಾಗಿ ವಿಪಿನ್ ಶ್ರೀವಾಸ್ತವ್ ಅವರ ನೇಮಕವನ್ನು ಸಾಮಾಜಿಕ ನ್ಯಾಯ ಜಂಟಿ ಕ್ರಿಯಾ ಸಮಿತಿ(ಜೆಎಸಿ) ತಿರಸ್ಕರಿಸಿದೆ.
'2007ರಲ್ಲಿ ಸಂಸ್ಥೆಯಲ್ಲಿ ನಡೆದ ಮತ್ತೊಬ್ಬ ದಲಿತ ಸಂಶೋಧನಾ ವಿದ್ಯಾರ್ಥಿ ಸೆಂತಿಲ್ ಕುಮಾರ್ ಹತ್ಯೆ ಪ್ರಕರಣದಲ್ಲಿ ವಿಪಿನ್ ಶ್ರೀವಾಸ್ತವ ಅವರು ಪ್ರಮುಖ ಆರೋಪಿಯಾಗಿದ್ದಾರೆ ಎಂಬುದನ್ನು ಮತ್ತೊಮ್ಮೆ ತಮ್ಮ ಗಮನಕ್ಕೆ ತರಲು ಬಯಸುತ್ತೇವೆ' ಎಂದು ಜೆಎಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಕುಲಪತಿ ಅಪ್ಪಾ ರಾವ್ ಅವರನ್ನು ಸುಧೀರ್ಘ ರಜೆಯ ಮೇಲೆ ಕಳುಹಿಸಲಾಗಿದ್ದು, ಪರಿಸ್ಥಿತಿ ತಣ್ಣಗಾಗುವರೆಗೆ ಕ್ಯಾಂಪಸ್‌ನಿಂದ ದೂರವಿರುವಂತೆ ಸೂಚಿಸಲಾಗಿದೆ.
ಕುಲಪತಿಗಳು ಸುದೀರ್ಘ ರಚನೆಯ ಮೇಲೆ ತೆರಳಿರುವುದರಿಂದ ಅವರ ಸ್ಥಾನಕ್ಕೆ ಮಧ್ಯಂತರ ಕುಲಪತಿಯಾಗಿ ಶ್ರೀವಾಸ್ತವ ಅವರನ್ನು ನೇಮಕ ಮಾಡಲಾಗಿತ್ತು.
ರೋಹಿತ್ ಪ್ರಕರಣವನ್ನು ಖಂಡಿಸಿ ವಿವಿಯ ಪ್ರಾಧ್ಯಾಪಕರು ತಮ್ಮ ಆಡಳಿತಾತ್ಮಕ ಹುದ್ದೆಗಳಿಗೆ ರಾಜಿನಾಮೆ ನೀಡುತ್ತಿದ್ದು, ಕೇಂದ್ರ ಸರ್ಕಾರ ಈ ಕೂಡಲೇ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರನ್ನು ವಜಾಗೊಳಿಸಬೇಕು ಎಂದು ಜೆಎಸಿ ಒತ್ತಾಯಿಸಿದೆ. ಅಲ್ಲದೆ ಒಂದು ವೇಳೆ ತನ್ನ ಬೇಡಿಕೆಯನ್ನು ಈಡೇರಿಸದಿದ್ದರೆ ಆಂಧ್ರ ಹಾಗೂ ತೆಲಂಗಾಣ ಬಂದ್ ಕರೆ ನೀಡುವುದಾಗಿ ಎಚ್ಚರಿಸಿದೆ.