ಬೆಂಗಳೂರು: ಕಡೆಗೂ ಹೆಬ್ಬಾಳ ಕ್ಷೇತ್ರದಿಂದ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್ ಗೆ ಮುಖ್ಯಮಂತ್ರಿ ದರ್ಶನ ಮಾತ್ರ ಸುಲಭವಾಗಲಿಲ್ಲ. ಏಕೆಂದರೆ, ಆಶೀರ್ವಾದಕ್ಕಾಗಿ ಮುಖ್ಯಮಂತ್ರಿ ನಿವಾಸಕ್ಕೆ ಬಂದಿದ್ದ ರೆಹಮಾನ್ ಷರೀಫ್ ಗೆ ಸಿದ್ದರಾಮಯ್ಯ ಅವರು ಒಂದು ಗಂಟೆಗೂ ಹೆಚ್ಚು ಕಾಲ ಕಾಯಿಸಿದರು. ಕಡೆಗೆ ಜಾಫರ್ ಷರೀಫ್ ಅವರೇ ಬಂದು ಸಿಎಂ ದರ್ಶನ ಮಾಡಿಸಿದರು.
ಸಿಎಂ ಸಿದ್ದರಾಮಯ್ಯ ಅಪ್ತ ಬೈರತಿ ಸುರೇಶ್ ಗೆ ಟಿಕೆಟ್ ಕೈ ತಪ್ಪಿರುವುದು ಅವರಿಗೆ ತೀವ್ರ ಅಸಮಾಧಾನ ತಂದಿದೆಯೆಂಬ ವಿಚಾರ ಕಾಂಗ್ರೆಸ್ ವಲಯದಲ್ಲೇ ಚರ್ಚಿತವಾಗುತ್ತಿರುವ ನಡುವೆಯೇ ಅಭ್ಯರ್ಥಿಯನ್ನೂ ಗಂಟೆ ಕಾಲ ಕಾಯಿಸಿದ ವಿಚಾರ ಪಕ್ಷದಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಫೆ.13ರಂದು ನಡೆಯುವ ಹೆಬ್ಬಾಳ ಕ್ಷೇತ್ರದ ಉಪಚುನಾವಣೆಗೆ ಬುಧವಾರ ನಾಮಪತ್ರ ಸಲ್ಲಿಕೆ ಕಡೆ ದಿನವಾಗಿತ್ತು.
ಮುಖ್ಯಮಂತ್ರಿ ನಿವಾಸ ಕಾವೇರಿಗೆ ಬಂದ ರೆಹಮಾನ್ ಷರೀಫ್ ಸಿಎಂ ಆಶೀರ್ವಾದ ಬಯಸಿದ್ದರು. ಸಿಎಂ ಮನೆಯಲ್ಲಿದ್ದರೂ ರೆಹಮಾನ್ ಗೆ ಎಂಟ್ರಿ ಅಷ್ಟು ಸುಲಭವಾಗಿರಲಿಲ್ಲ. ಅಲ್ಲದೆ ರೆಹಮಾನ್ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಎಚ್ ಎಂಟಿ ಮೈದಾನದಿಂದ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಸಾಗುವುದು ನಿಶ್ಚಿತವಾಗಿತ್ತು. ಆದರೆ ರೆಹಮಾನ್ ಗಾಗಿ ಕಾದು ಕುಳಿತಿದ್ದ ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿ ಕರಗತೊಡಗಿದ್ದರು.
ಕೊನೆಗೆ ಕಾಂಗ್ರೆಸ್ ಹಿರಿಯ ನಾಯಕ ಜಾಫರ್ ಷರೀಫ್ ಕಾವೇರಿಗೆ ಬಂದ ಬಳಿಕವಷ್ಟೇ ಸಿಎಂ ಮನೆ ಬಾಗಿಲು ರೆಹಮಾನ್ ಗೆ ತೆರೆದುಕೊಂಡಿತು. ಸಿಎಂಗೆ ಹೂಗುಚ್ಛ ನೀಡಿ ಓಡೋಡಿ ಬಂದ ರೆಹಮಾನ್ ಎಚ್ಎಂಟಿ ಮೈದಾನದಿಂದ ಕೆಲವೇ ಕಾರ್ಯಕರ್ತರೊಂದಿಗೆ ಬೈಕ್ ರ್ಯಾಲಿ ನಡೆಸಿ ಜೆಸಿ ನಗರದ ಬಿಬಿಎಂಪಿ ಕಚೇರಿ ಸೇರಿದ್ದರು. ಆದರೆ ರೆಹಮಾನ್ ರೊಂದಿಗೆ ಯಾವೊಬ್ಬ ಕಾಂಗ್ರೆಸ್ ನಾಯಕರೂ ಇರಲಿಲ್ಲ. ಅಲ್ಪಸಂಖ್ಯಾತ ಸಚಿವರೂ ಬಂದಿರಲಿಲ್ಲ. ಇದು ಕಾಂಗ್ರೆಸ್ ನಲ್ಲಿನ ಅಸಮಾಧಾನಕ್ಕೆ ಇನ್ನಷ್ಟು ಪುಷ್ಟಿ ನೀಡುವಂತಿತ್ತು.
ಹೆಲ್ಮೆಟ್ ಧರಿಸಿ ಹಿಂಬದಿ ಸವಾರಿ ಮಾಡಿದ್ದ ರೆಹಮಾನ್ ದ್ವಿಚಕ್ರ ವಾಹನದಿಂದಿಳಿದದ್ದೇ ಓಡೋಡಿ ಬಿಬಿಎಂಪಿ ಕಚೇರಿ ತಲುಪಿ ರಾಹುಕಾಲ ಮುಗಿದ ಬಳಿಕ ನಾಮಪತ್ರ ಸಲ್ಲಿಸಿದರು. ರೆಹಮಾನ್ ಬಂದು ಅರ್ಥ ಗಂಟೆ ಬಳಿಕವಷ್ಟೇ ಸಚಿವ ರಾಮಲಿಂಗಾರೆಡ್ಡಿ ಆಗಮನವಾಗಿತ್ತು.