ಕೇಂದ್ರ ಸಚಿವೆ ಸ್ಮೃತಿ ಇರಾನಿ
ನವದೆಹಲಿ: ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯಿಂದ ಕೈಬಿಟ್ಟು ಜವಳಿ ಖಾತೆಗೆ ಬದಲಾಗಿ ಬಂದ ಒಂದು ದಿನದ ನಂತರ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆಯಾಗಿ ತಾವು ಮಾಡಿದ ಕೆಲಸ 'ತೃಪ್ತಿದಾಯಕ ಮತ್ತು ಫಲದಾಯಕ' ಎಂದಿದ್ದಾರೆ.
"30 ವರ್ಷಗಳ ನಂತರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸುವ ಭಾಗವಾಗಿದ್ದಕ್ಕೆ ನನಗೆ ಸಂತಸವಿದೆ ಮತ್ತು ಗೌರವಯುತ ಪ್ರಧಾನ ಮಂತ್ರಿ ಈ ಅವಕಾಶ ನೀಡಿದ್ದಕ್ಕೂ" ಎಂದು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಸ್ಮೃತಿ ಹೇಳಿದ್ದಾರೆ.
ತಾವು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದ ಸಮಯದಲ್ಲಿಯೇ 'ಪ್ರತಿ ರಾಜ್ಯ ಮತ್ತು ಪ್ರತಿ ಗ್ರಾಮ'ದ ಕಲ್ಪನೆಯನ್ನು ಸಾಕಾರಗೊಳಿಸಿದ್ದು ಮತ್ತು ಹೊಸ ಶಿಕ್ಷಣ ನೀತಿಗೆ ಎಲ್ಲರ ಅಭಿಪ್ರಾಯಗಳನ್ನು ಒಳಗೊಂಡಿದ್ದು ಎಂದಿದ್ದಾರೆ.
"ಭಾರತದ ಇತಿಹಾಸದಲ್ಲೇ ಇದು ಮೊದಲ ಬಾರಿಗೆ ನಡೆದಿದೆ" ಎಂದು ಕೂಡ ಅವರು ಹೇಳಿದ್ದಾರೆ.
ತಮ್ಮನ್ನು ಬದಲಾಯಿಸಿರುವ ಸಚಿವರ ಬಗ್ಗೆ ಮಾತನಾಡಿದ ಇರಾನಿ "ಪ್ರಧಾನಿಯವರ ಕಲ್ಪನೆಯನ್ನು ಮುನ್ನಡೆಸಲು ಪ್ರಕಾಶ್ ಜಾವ್ಡೇಕರ್ ಬಂದಿರುವುದಕ್ಕೆ ಸಂತಸವಾಗಿದೆ. ನನ್ನ ಕೆಲಸವನ್ನು ಪ್ರಶಂಸಿಸಿದ್ದಕ್ಕೆ ಮತ್ತು ಕೆಲಸವನ್ನು ಮುಂದೆ ಕೊಂಡೊಯ್ಯುವುದಾಗಿ ತಿಳಿಸಿದ್ದಕ್ಕೆ ಪ್ರಕಾಶ್ ಅವರಿಗೆ ಧನ್ಯವಾದಗಳು" ಎಂದು ಕೂಡ ಅವರು ಹೇಳಿದ್ದಾರೆ.
ತಮ್ಮ ಹೊಸ ಜವಾಬ್ದಾರಿಯ ಬಗ್ಗೆ ಪ್ರತಿಕ್ರಿಯಿಸಿರುವ ಇರಾನಿ ಜವಳಿ ದೇಶದ ಅತಿ ಮುಖ್ಯ ವಲಯಗಳಲ್ಲಿ ಒಂದು ಹಾಗೂ ಪ್ರಧಾನಿಯವರ ಮೇಕ್ ಇನ್ ಇಂಡಿಯಾ ಕನಸನ್ನು ಸಾಕಾರಗೊಳಿಸುವುದಕ್ಕೆ ದೇಶದ ಕೌಶಲ್ಯವನ್ನು ತೊಡಗಿಸಿಕೊಳ್ಳುವುದಕ್ಕೆ ಅಪಾರ ಅವಕಾಶವಿದೆ ಎಂದಿದ್ದಾರೆ.
"ಜವಳಿ ಇಲಾಖೆಗೆ ಒತ್ತು ನೀಡಲು ಪ್ರಧಾನಿ ಬಯಸಿದ್ದಾರೆ ಎಂದು ನನಗೆ ಗೊತ್ತು ಹಾಗೆಯೇ ಈ ವಲಯಕ್ಕೆ ಅವರು ಹೊಸ ಅನುದಾನ ನೀಡಿರುವದು ಅದನ್ನು ಸೂಚಿಸುತ್ತದೆ. ಸಂಪುಟ ಜವಳಿ ವಲಯದ ಬಗ್ಗೆ ಹೊಂದಿರುವ ನೀಲಿನಕ್ಷೆಯನ್ನು ಸಾಕ್ಷಾತ್ಕಾರಗೊಳಿಸಲು ನನಗೆ ಅವಕಾಶ ಸಿಕ್ಕಿರುವುದಕ್ಕೆ ಖುಷಿಯಿದೆ" ಎಂದು ಕೂಡ ಅವರು ಹೇಳಿದ್ದಾರೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯಿಂದ ಹೊರಹಾಕಿರುವುದಕ್ಕೆ ತಮ್ಮ ಅಭಿಪ್ರಾಯವೇನು ಎಂಬ ಮಾಧ್ಯಮಗಳ ಪುನರಾವರ್ತಿತ ಪ್ರಶ್ನೆಗೆ "ಇಲ್ಲಿ ಹಲವಾರು ಪ್ರಶ್ನೆಗಳಿವೆ ಮತ್ತು ಎಲ್ಲರೂ ಅವರದ್ದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಜನ ಮಾತನಾಡಿಕೊಳ್ಳುತ್ತಾರೆ, ಮಾತನಾಡಿಕೊಳ್ಳುವುದೇ ಅವರ ವ್ಯವಹಾರ" ಎಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos