ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 16ರಂದು ಭಾರತದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಅಂತರ ರಾಜ್ಯ ಸಂಬಂಧಗಳು, ಆಂತರಿಕ ಭದ್ರತೆ ಹಾಗೂ ಎಸ್ ಸಿ, ಎಸ್ ಟಿಯ ಆಟ್ರೊಸಿಟಿಗೆ ಸಂಬಂಧಿಸಿದಂತೆ ಚರ್ಚಿಸಲಿದ್ದಾರೆ.
ಸುಮಾರು ಹತ್ತು ವರ್ಷಗಳ ನಂತರ 11ನೇ ಅಂತರರಾಜ್ಯ ಸಮಿತಿ ಸಭೆ ಕರೆಯಲಾಗಿದ್ದು, ಶಾಲಾ ಶಿಕ್ಷಣ, ಸಬ್ಸಿಡಿ ನೇರ ವರ್ಗಾವಣೆ ಯೋಜನೆ, ಆಧಾರ ಕಾರ್ಡ್, ಆರ್ಥಿಕ ಮತ್ತು ಸಮಾಜಿಕ ಯೋಜನೆಗಳ ಬಗ್ಗೆ ಚರ್ಚೆ ನಡೆಯಲಿದೆ.
ಅಂತರಾಜ್ಯ ಸಮಿತಿಗೆ ಪ್ರಧಾನಮಂತ್ರಿಗಳು ಅಧ್ಯಕ್ಷರಾಗಿದ್ದು, ಅವರ ಸಂಪುಟದ ಆರು ಹಿರಿಯ ಸಚಿವರು ಸದಸ್ಯರಾಗಿದ್ದಾರೆ. ಈ ಸಮಿತಿಗೆ ಪ್ರಧಾನಿ ಮೋದಿ ಅವರು ಗೃಹ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ವಿತ್ತ ಸಚಿವ ಅರುಣ್ ಜೇಟ್ಲಿ, ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಾರೆ. ಅಲ್ಲದೆ ಇತರೆ 11 ಸಚಿವರು ಖಾಯಂ ಆಹ್ವಾನಿತರಾಗಿದ್ದಾರೆ.
ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಈ ಸಮಿತಿಯ ಸದಸ್ಯರಾಗಿದ್ದು, ಸಭೆಯಲ್ಲಿ ಅವರು ತಮ್ಮ ರಾಜ್ಯಗಳ ಕುಂದುಕೊರತೆಗಳನ್ನು ಹೇಳಿಕೊಳ್ಳಬಹುದಾಗಿದೆ.
ಈ ಹಿಂದೆ 2006ರಲ್ಲಿ ಈ ಅಂತರ ರಾಜ್ಯ ಸಮಿತಿ ಸಭೆ ನಡೆದಿತ್ತು. ಯುಪಿಎ ಸರ್ಕಾರ 10 ವರ್ಷಗಳ ಅವಧಿಯಲ್ಲಿ ಕೇವಲ ಎರಡು ಸಭೆ ಮಾತ್ರ ನಡೆಸಿತ್ತು.