ಐ ಎಫ್ ಎಸ್ ಅಧಿಕಾರಿ ಸಂಜೀವ್ ಚತುರ್ವೇದಿ
ನವದೆಹಲಿ: ಐ ಎಫ್ ಎಸ್ ಅಧಿಕಾರಿ ಸಂಜೀವ್ ಚತುರ್ವೇದಿ ಅವನ್ನು ವಿಶೇಷ ಕರ್ತವ್ಯ ಅಧಿಕಾರಿಯಾಗಿ ದೆಹಲಿ ಸರ್ಕಾರಕ್ಕೆ ವರ್ಗಾವಣೆ ಮಾಡುವುದಕ್ಕೆ ಕೋರಿದ ಮನವಿಯನ್ನು ಕೇಂದ್ರ ಸರ್ಕಾರ ನಿರಾಕರಿಸಿದ ಕೆಲವೇ ದಿನಗಳಲ್ಲಿ ಎಎಪಿ ಈ ನಿರ್ಧಾರವನ್ನು ಮರುಪರಿಗಣನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಗ್ರಹಿಸಿದೆ.
ಈ ಅಧಿಕಾರಿಯ ಸೇವೆಯನ್ನು ಕೇಂದ್ರ ಸರ್ಕಾರ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುತ್ತಿಲ್ಲ ಎಂದು ಕೂಡ ಆಮ್ ಆದ್ಮಿ ಸರ್ಕಾರದ ಮುಖಂಡ ದೂರಿದ್ದಾರೆ.
"ಈ ಅಧಿಕಾರಿ ತಮ್ಮ ಪ್ರಾಮಾಣಿಕತೆ ಮತ್ತು ಕಾರ್ಯದಕ್ಷತೆಗೆ ಹೆಸರುವಾಸಿ, ಆದರೆ ಇವರ ಸೇವೆಯನ್ನು ಕೇಂದ್ರ ಸರ್ಕಾರ ಸರಿಯಾಗಿ ಬಳಸಿಕೊಳ್ಳದೆ ಇರುವುದು ದುರದೃಷ್ಟಕರ. ಜನರ ಕಲ್ಯಾಣಕ್ಕಾಗಿ ದೆಹಲಿ ಸರ್ಕಾರಕ್ಕೆ ಅವರ ಸೇವೆ ಬೇಕಾಗಿದೆ" ಎಂದು ಅರವಿಂದ್ ಕೇಜ್ರಿವಾಲ್ ಜುಲೈ 3 ರಂದು ಕೇಂದ್ರ ಸರ್ಕಾರಕ್ಕೆ ಬರೆದ ಪತ್ರವನ್ನು ಸಾರ್ವಜನಿಕಗೊಳಿಸಿದ್ದಾರೆ.
"ದೆಹಲಿಯ ಜನರ ಕಲ್ಯಾಣಕ್ಕಾಗಿ ಹಾಗೂ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಲ್ಲಿಟ್ಟುಕೊಂಡು ಸ್ವಲ್ಪ ಕರುಣೆ ತೋರಿ ಸಂಜಯ್ ಚತುರ್ವೇದಿ ಅವರನ್ನು ದೆಹಲಿ ಸರ್ಕಾರಕ್ಕೆ ವರ್ಗಾವಣೆ ಮಾಡಲು ಮತ್ತೆ ಪರಿಗಣಿಸಲು ಮನವಿ ಮಾಡುತ್ತಿದ್ದೇನೆ" ಎಂದು ಕೇಜ್ರಿವಾಲ್ ಹೇಳಿದ್ದಾರೆ.
2002 ರ ಐ ಎಫ್ ಎಸ್ ಅಧಿಕಾರಿ ಚತುರ್ವೇದಿಯವರನ್ನು ತಮ್ಮ ಕಚೇರಿಯ ವಿಶೇಷ ಅಧಿಕಾರಿಯಾಗಿ ನೇಮಿಸಿ ವರ್ಗಾವಣೆ ಮಾಡಲು ಫೆಬ್ರವರಿ 16, 2015 ರಲ್ಲಿ ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು.
ಜೂನ್ 2016 ರಲ್ಲಿ ಇದು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಉತ್ತರಿಸಿತ್ತು. ಜುಲೈ 3 ರಂದು ಬರೆದಿರುವ ಪತ್ರದಲ್ಲಿ ಕೇಜ್ರಿವಾಲ್ "ನಮ್ಮ ಪ್ರಜಾಪ್ರಭುತ್ವದಲ್ಲಿ ಮುಖ್ಯಮಂತ್ರಿ ಅಥವಾ ಯಾವುದೇ ರಾಜ್ಯದ ಸಚಿವರು ಸರ್ಕಾರದ ಸಿಬ್ಬಂದಿಗಾಗಿ ಬೇಟಿಕೆಯಿಟ್ಟಾಗ ರಾಜಕೀಯ ದ್ವೇಷವನ್ನು ಮರೆತು ವರ್ಗಾವಣೆ ಮಾಡಿಕೊಡುವುದು ರೂಢಿ. ಆದರೆ 16 ತಿಂಗಳುಗಳ ವಿಳಂಬದ ನಂತರ, ಕೋರ್ಟ್ ಗಳು ನಾಲ್ಕು ಬಾರಿ ಸೂಚನೆ ನೀಡಿದ ಮೇಲೆಯೂ ನಮ್ಮ ಮನವಿಯನ್ನು ತಿರಸ್ಕರಿಸಿರುವುದು ಆಶ್ಚರ್ಯ ತಂದಿದೆ" ಎಂದು ಕೇಜ್ರಿವಾಲ್ ಬರೆದಿದ್ದಾರೆ.
ಮ್ಯಾಗ್ಸೆಸೆ ಮೃಶಸ್ತಿ ವಿಜೇತ ಚತುರ್ವೇದಿ ಸದ್ಯಕ್ಕೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.