ನವದೆಹಲಿ: ಪ್ಯಾರಿಸ್ ನ ನೈಸ್ ನಗರದಲ್ಲಿ ನಡೆದ ಭೀಕರ ಉಗ್ರ ದಾಳಿ ಪ್ರಕರಣವನ್ನು ವಿಶ್ವ ನಾಯಕರು ಕಟುವಾಗಿ ಟೀಕಿಸಿದ್ದು, ಭಯೋತ್ಪಾದನೆ ವಿರುದ್ದ ಎಲ್ಲ ದೇಶಗಳು ಒಗ್ಗೂಡಬೇಕಾಗಿದೆ ಎಂದು ಹೇಳಿದ್ದಾರೆ.
ಬ್ಯಾಸ್ಟ್ಲೈಲ್ ಡೇ ನಿಮಿತ್ತ ನೈಸ್ ನಗರದಲ್ಲಿ ಆಯೋಜನೆಯಾಗಿದ್ದ ಸಂಭ್ರಮಾಚರಣೆ ವೇಳೆ ನಿನ್ನೆ ರಾತ್ರಿ ನಡೆದ ಭೀಕರ ಉಗ್ರ ದಾಳಿಯಲ್ಲಿ 80 ಮಂದಿ ಸಾವನ್ನಪ್ಪಿ, 100ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಪೈಕಿ 30ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಭೀಕರ ಉಗ್ರ ದಾಳಿಯನ್ನು ವಿಶ್ವ ನಾಯಕರು ಖಂಡಿಸಿದ್ದು, ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ.
ಘಟನೆ ಕುರಿತಂತೆ ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ಚಪಡಿಸಿರುವ ಪ್ರಧಾನಿ ಮೋದಿ, ಫ್ರೆಂಚ್ ಸಹೋದರ-ಸಹೋದರಿಯರ ಜತೆಗೆ ಭಾರತವಿದ್ದು, ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಅಂತೆಯ ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕೂಡ ಘಟನೆಯನ್ನು ಖಂಡಿಸಿದ್ದು, ಫ್ರಾನ್ಸ್ ಜನತೆಯ ಬೆಂಬಲವಾಗಿ ಭಾರತ ನಿಲ್ಲಲಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಫ್ರಾನ್ಸ್ ನ ನೀಸ್ ನಗರದ ಮೇಲಿನ ದಾಳಿಯನ್ನು ಅಮೆರಿಕದ ಪ್ರತಿಯೊಬ್ಬ ನಾಗರಿಕನೂ ಖಂಡಿಸುತ್ತಾನೆ. ಘಟನೆಯಲ್ಲಿ ಸಾವನ್ನಪ್ಪಿದವರ ಆತ್ಮಕ್ಕೆ ಶಾಂತಿಕೋರುತ್ತಾ, ಗಾಯಾಳುಗಳು ಶೀಘ್ರ ಚೇತರಿಕೆ ಕಾಣುವಂತಾಗಲಿ ಎಂದು ಹಾರೈಸುತ್ತೇನೆ. ಅಂತೆಯೇ ನಾನು ಅಧಿಕಾರಿಗಳಿಗೆ ಫ್ರಾನ್ಸ್ ಸರ್ಕಾರಕ್ಕೆ ಬೇಕಾದ ಅಗತ್ಯ ನೆರವನ್ನು ನೀಡುವಂತೆ ಮತ್ತು ನಿರಂತರ ಸಂಪರ್ಕದಲ್ಲಿರುವಂತೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಉಳಿದಂತೆ ವಿವಿಧ ದೇಶಗಳ ನಾಯಕ ಪ್ರತಿಕ್ರಿಯೆ ಇಲ್ಲಿದೆ.