ಬೆಂಗಳೂರು: ಡಿವೈಎಸ್ಪಿ ಎಂ.ಕೆ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಬೆಂಗಳೂರು ಅಭಿವೃದ್ಧಿ ಸಚಿವ ಕೆಜೆ ಜಾರ್ಜ್ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.
ಇಂದು ಮಡಿಕೇರಿ ಹೆಚ್ಚುವರಿ ಜೆಎಂಎಫ್ ಸಿ ಕೋರ್ಟ್ ನ್ಯಾಯಾಧೀಶೆ ಅನ್ನಪೂರ್ಣೇಶ್ವರಿ ಅವರು ಕೆಜೆ ಜಾರ್ಜ್ ಹಾಗೂ ಹಿರಿಯ ಐಪಿಎಸ್ ಅಧಿಕಾರಿಗಳಾದ ಪ್ರೊಣವ್ ಮೊಹಂತಿ ಹಾಗೂ ಎ.ಎಂ. ಪ್ರಸಾದ್ ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮಡಿಕೇರಿ ನಗರ ಠಾಣೆ ಪೊಲೀಸರಿಗೆ ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತುರ್ತು ಸಭೆ ಕರೆದಿದ್ದರು. ಕೆಜೆ ಜಾರ್ಜ್ ಅವರು ಮುಖ್ಯಮಂತ್ರಿ ಕಚೇರಿಗೆ ತೆರಳಿ ರಾಜಿನಾಮೆ ಪತ್ರವನ್ನು ನೀಡಿದ್ದಾರೆ.
ಸ್ಥಳೀಯ ನ್ಯಾಯಾಲಯ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ಎಂಬ ಆದೇಶ ನೀಡಿತ್ತು. ಈ ಆದೇಶಕ್ಕೆ ತಲೆಬಾಗಲು ಸರ್ಕಾರ ತೀರ್ಮಾನಿಸಿದ್ದು, ಕೋರ್ಟ್ ಆದೇಶ ವಿರುದ್ಧ ಸರ್ಕಾರ ಮೇಲ್ಮನವಿಯನ್ನು ಸಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.
ಇನ್ನು ಆರೋಪಿ ಸ್ಥಾನದಲ್ಲಿ ನಿಂತಿರುವ ಹಿರಿಯ ಐಪಿಎಸ್ ಅಧಿಕಾರಿಗಳಾದ ಪ್ರೊಣವ್ ಮೊಹಂತಿ ಹಾಗೂ ಎ.ಎಂ. ಪ್ರಸಾದ್ ಅವರಿಗೆ ಸರ್ಕಾರ ಕಡ್ಡಾಯ ರಜೆ ಮೇಲೆ ಕಳುಹಿಸಲು ಚಿಂತನೆ ನಡೆಸಿದೆ.
ಡಿವೈಎಸ್ಪಿ ಗಣಪತಿ ಅವರು ಸಾವಿಗೂ ಮುನ್ನ ನನಗೆ ಏನೇ ಆದರೂ ಅದಕ್ಕೆ ಕೆಜೆ ಜಾರ್ಜ್ ಹಾಗೂ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳೇ ಕಾರಣ ಎಂದು ಹೇಳಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ಪ್ರಕರಣ ನಂತರ ಜಾರ್ಜ್ ತಲೆದಂಡಕ್ಕೆ ವಿಪಕ್ಷಗಳು ಆಗ್ರಹಿಸಿದ್ದವು.