ನವದೆಹಲಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂಬ ತನ್ನ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಕೇರಳದ ಎಲ್ ಡಿಎಫ್ ಸರ್ಕಾರ ಹೇಳಿದೆ.
ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದು 2007ರಲ್ಲಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ಪ್ರಮಾಣಪತ್ರಕ್ಕೆ ಎಲ್ ಡಿಎಫ್ ಸರ್ಕಾರ ಬದ್ಧವಾಗಿದೆ ಎಂದು ಕೇರಳ ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್ ಅವರು ವರದಿಗಾರರಿಗೆ ತಿಳಿಸಿದ್ದಾರೆ.
2007ರಲ್ಲಿ ಎಲ್ ಡಿಎಫ್ ಸರ್ಕಾರ ಸಲ್ಲಿಸಿದ್ದ ಪ್ರಮಾಣಪತ್ರಕ್ಕೆ ನಾವು ಬದ್ಧರಾಗಿದ್ದಾರೆ. ಆದರೆ ನಂತರ ಅಧಿಕಾರಕ್ಕೆ ಬಂದ ಯುಡಿಎಫ್ ಸರ್ಕಾರ ತನ್ನ ನಿರ್ಧಾರ ಬದಲಿಸಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ 10ರಿಂದ 50 ವರ್ಷ ವಯೋಮಾನದ ಮಹಿಳೆಯರಿಗೆ ಪ್ರವೇಶ ನಿಷೇಧ ಬೆಂಬಲಿಸಿ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿತ್ತು ಎಂದರು.
ಕಾಂಗ್ರೆಸ್ ನೇತೃತ್ವದ ಹಿಂದಿನ ಸರ್ಕಾರ ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ನೀಡುವುದನ್ನು ವಿರೋಧಿಸಿತ್ತು. ಇದು ನಂಬಿಕೆ ಮತ್ತು ಪರಂಪರೆಯ ಪ್ರಶ್ನೆ ಎಂದು ಹಿಂದಿನ ಸರ್ಕಾರ ಹೇಳಿತ್ತು. ಮಹಿಳೆಯರಿಗೆ ಪ್ರವೇಶ ನೀಡುವುದು ದೇವಾಲಯದ ಆಚರಣೆಗೆ ವಿರುದ್ಧ ವಾಗುತ್ತದೆ ಎಂದು ಫೆಬ್ರುವರಿಯಲ್ಲಿ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಹೇಳಿತ್ತು.
2006–11ರ ಅವಧಿಯಲ್ಲಿ ಅಧಿಕಾರದಲ್ಲಿದ್ದ ಎಲ್‌ಡಿಎಫ್ ಸರ್ಕಾರ ಎಲ್ಲ ಮಹಿಳೆಯರಿಗೆ ಎಲ್ಲ ದೇವಸ್ಥಾನಗಳಿಗೆ ಪ್ರವೇಶ ನೀಡುವುದರ ಪರವಾಗಿತ್ತು.