ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ರಾಷ್ಟ್ರಪತಿ ಕಚೇರಿಯಲ್ಲಿ ಸೋಮವಾರಕ್ಕೆ ನಾಲ್ಕು ವರ್ಷಗಳನ್ನು ಪೂರೈಸಿದ ಪ್ರಣಬ್ ಮುಖರ್ಜಿ ಅವರ ಬಗ್ಗೆ ಪ್ರಶಂಸೆಯ ಮಹಾಪೂರವನ್ನೇ ಹರಿಸಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಣಬ್ ದಾ ನನ್ನ "ಪೋಷಕ ಮತ್ತು ಸಲಹೆಗಾರ" ಎಂದಿರುವುದಲ್ಲದೆ ಎರಡು ವರ್ಷದ ಹಿಂದೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಹಲವಾರು ವಿಷಯಗಳಲ್ಲಿ ನನ್ನ ಕೈಹಿಡಿದು ನಡೆಸಿದ್ದಾರೆ ಎಂದಿದ್ದಾರೆ.
"ನಾನು ದೆಹಲಿ ಜಗತ್ತಿಗೆ ಹೊಸಬನಾಗಿದ್ದೆ. ವಾತಾವರಣ ಹೊಸದಾಗಿತ್ತು. ಹಲವಾರು ವಿಷಯಗಳಲ್ಲಿ, ಪೋಷಕನಂತೆ, ಸಲಹೆಗಾರನಂತೆ, ಪ್ರಣಬ್ ದಾ ನನ್ನ ಕೈಹಿಡಿದು ನಡೆಸಿದ್ದಾರೆ. ಈ ರೀತಿಯ ಸವಲತ್ತು ಕೆಲವರಿಗಷ್ಟೇ ಸಿಗುತ್ತದೆ" ಎಂದು ರಾಷ್ಟ್ರಪತಿ ಭವನದ ವಸ್ತುಸಂಗ್ರಹಾಲಯದ ಎರಡನೇ ಹಂತದ ಉದ್ಘಾಟನೆಯ ವೇಳೆಯಲ್ಲಿ ಹೇಳಿದ್ದಾರೆ.
ರಾಷ್ಟ್ರಪತಿ ಭವನದ ಇತಿಹಾಸ ಉಳಿಸಲು ಮತ್ತು ಅದರ ಜೀರ್ಣೋದ್ಧಾರದ ಬಗ್ಗೆಯೂ ತೆಗೆದಿಕೊಂಡಿರುವ ಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಮೋದಿ, ತಮ್ಮ ದೀರ್ಘ ಕಾಲದ ಸಾರ್ವಜನಿಕ ಜೀವನದಲ್ಲಿ ಹಾಗು ಈ ನಾಲ್ಕು ವರ್ಷಗಳ ಅವಧಿಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದಿದ್ದಾರೆ.
ರಾಷ್ಟ್ರಪತಿ ಭವನವನ್ನು ಸಾಮಾನ್ಯ ಮನುಷ್ಯ ಮತ್ತು ಉನ್ನತ ಅಧಿಕಾರದಲ್ಲಿರುವ ವ್ಯಕ್ತಿಯ ಸೇರುವ ಜಾಗವನ್ನಾಗಿಸಿದ್ದಾರೆ ರಾಷ್ಟ್ರಪತಿ ಪ್ರಣಬ್ ಎಂದು ಕೂಡ ಮೋದಿ ಹೇಳಿದ್ದಾರೆ.
"ನನ್ನ ಮತ್ತು ರಾಷ್ಟ್ರಪತಿಯವರ ರಾಜಕೀಯ ಹಿನ್ನಲೆ ಬೇರೆಯದ್ದು ಎಂಬುದು ಪ್ರಮುಖ ವಿಷಯ ಆದರೆ ಆದರೆ ಅವರ ಜೊತೆಗಿದ್ದಾಗ, ಪ್ರಜಾಪ್ರಭುತ್ವದಲ್ಲಿ ವಿವಿಧ ರಾಜಕೀಯದಲ್ಲಿ ಬೆಳೆದುಬಂದರೂ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಬೇಕು ಎಂದು ಗೋಚರವಾಗುತ್ತದೆ" ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics