ಪ್ರಧಾನ ಸುದ್ದಿ

ಬ್ರಿಟನ್ ನೂತನ ಪ್ರಧಾನಿ ಥೆರೆಸಾ ಮೇಗೆ ಕರೆ ಮಾಡಿ ಶುಭಾಶಯ ಕೋರಿದ ಮೋದಿ

Srinivasamurthy VN

ನವದೆಹಲಿ: ಬ್ರೆಕ್ಸಿಟ್ ಜನಮತದ ಬಳಿಕ ಯೂರೋಪಿಯನ್ ಒಕ್ಕೂಟದಿಂದ ಹೊರಬಂದ ಬ್ರಿಟನ್ ಗೆ ನೂತನ ಪ್ರಧಾನಿಯಾಗಿ ನೇಮಕವಾಗಿರುವ ಥೆರೆಸಾಮೇ ಅವರಿಗೆ ಪ್ರಧಾನಿ ಮೋದಿ  ದೂರವಾಣಿ ಕರೆ ಮಾಡಿ ಶುಭಾಶಯ ಕೋರಿದ್ದಾರೆ.

ಬುಧವಾರ ಬೆಳಗ್ಗೆ ಲಂಡನ್ ಗೆ ಕರೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಥೆರೆಸಾ ಮೇ ಅವರಿಗೆ ಶುಭಾಶಯ ಕೋರಿದ್ದಾರೆ. ಈ  ವೇಳೆ ಭಾರತ-ಬ್ರಿಟನ್ ನಡುವಿನ ಸೌಹಾರ್ಧಯುತ ದ್ವಿಪಕ್ಷೀಯ ಮಾತುಕತೆ ಕುರಿತಂತೆ ಉಭಯ ನಾಯಕರು ಚರ್ಚಿಸಿದ್ದು, ಉಭಯ ದೇಶಗಳ ಸಂಬಂಧವನ್ನು ಮತ್ತಷ್ಟು ವೃದ್ಧಿಸುವ ಕುರಿತಂತೆ  ಕೈಗೊಳ್ಳ ಬಹುದಾದ ಕ್ರಮಗಳ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

ಅಂತೆಯೇ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿರುವ ಥೆರೆಸಾ ಮೇ ಅವರು, ಭಾರತ ಮತ್ತು ಬ್ರಿಟನ್ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯ  ನಿರ್ವಹಿಸಲು ತಾವು ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ. ಅಂತೆಯೇ ಭಯೋತ್ಪಾದನೆಯಂತಹ ಜಾಗತಿಕ ಸಮಸ್ಯೆಗಳನ್ನು ಎದುರಿಸುವ ನಿಟ್ಟಿನಲ್ಲಿ ಭಾರತದೊಂದಿಗೆ ಸದಾಕಾಲ ನಿಲ್ಲುವ  ಭರವಸೆ ಕೂಡ ನೀಡಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಕಳೆದ ನವೆಂಬರ್ ನಲ್ಲಿ ತಾವು ಕೈಗೊಂಡಿದ್ದ ಬ್ರಿಟನ್ ಪ್ರವಾಸದ ಮೆಲುಕು ಹಾಕಿದರು ಎಂದು ಪ್ರಧಾನಿ ಕಾರ್ಯಾಲಯ  ತಿಳಿಸಿದೆ.

ಬ್ರೆಕ್ಸಿಟ್ ಜನಮತ ಸಂಗ್ರಹದಲ್ಲಿ ಬ್ರಿಟನ್ ಯೂರೋಪಿಯನ್ ಒಕ್ಕೂಟದಿಂದ ಹೊರಹೋಗುವ ಪರ ಮತ ಹಾಕಿದ ಹಿನ್ನಲೆಯಲ್ಲಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಅಂದಿನ ಪ್ರಧಾನಿ ಡೇವಿಡ್  ಕೆಮರಾನ್ ಅವರು ತಮ್ಮ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದರು. ಅವರ ಬದಲಿಗೆ ಥೆರೆಸಾಮೇ ಅವರನ್ನು ಆಯ್ಕೆ ಮಾಡಲಾಗಿತ್ತು. ಕಳೆದ ಜುಲೈ 13ರಂದು ಥೆರೆಸಾಮೇ ಅವರು ನೂತನ ಬ್ರಿಟನ್  ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

SCROLL FOR NEXT