ಪ್ರಧಾನ ಸುದ್ದಿ

ಲೋಕಸಭೆಯಲ್ಲೂ "ಮಹದಾಯಿ" ಕೋಲಾಹಲ: ವಿವಾದಕ್ಕೆ ಸೋನಿಯಾ ಕಾರಣ ಎಂದ ಸುರೇಶ್ ಅಂಗಡಿ

Srinivasamurthy VN

ನವದೆಹಲಿ: ಕರ್ನಾಟಕದಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿರುವ ಮಹದಾಯಿ ಮಧ್ಯಂತರ ಆದೇಶ ಇದೀಗ ಸಂಸತ್ತ್ ಕಲಾಪದಲ್ಲೂ ಕೋಲಾಹಲಕ್ಕೆ ಕಾರಣವಾಗಿದ್ದು, ಕಾಂಗ್ರೆಸ್  ಮತ್ತು ಬಿಜೆಪಿ ಸಂಸದರ ಕೆಸರೆರಚಾಟಕ್ಕೆ ಕಾರಣವಾಗಿದೆ.

ಲೋಕಸಭೆಯಲ್ಲಿ ಇಂದು ಈ ಬಗ್ಗೆ ವಿಷಯ ಪ್ರಸ್ತಾಪಿಸಿ ಮಾತನಾಡಿದ ಬಿಜೆಪಿ ಸಂಸದ ಸುರೇಶ್ ಅಂಗಡಿ ಅವರು, ನ್ಯಾಯಾಧಿಕರಣದ ತೀರ್ಪು ಕರ್ನಾಟಕಕ್ಕೆ ಮಾರಕವಾಗಿದೆ. ಹಲವು ಜಿಲ್ಲೆಗಳ  ಜನರು ಕುಡಿಯುವ ನೀರಿಲ್ಲದೆ ಪರಿತಪಿಸುತ್ತಿದ್ದಾರೆ. ಇಂತಹುದೊಂದು ಪರಿಸ್ಥಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರೇ ಕಾರಣ. ಯುಪಿಎ ಆಡಳಿತವಿದ್ದ ಸಂದರ್ಭದಲ್ಲಿ ರಾಜ್ಯದ ಜನರ  ಬೇಡಿಕೆಯನ್ನು ಕಡೆಗಣಿಸಿದ್ದರು ಎಂದು ಆರೋಪಿಸಿದರು.

ಇದಕ್ಕೆ ಸದನದಲ್ಲೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸಂಸದರು ಸುರೇಶ್ ಅಂಗಡಿ ಹೇಳಿಕೆಯನ್ನು ಖಂಡಿಸಿದರು. ಅಲ್ಲದೆ ಬಿಜೆಪಿ ಸಂಸದರು ಪ್ರಕರಣದ ಹಾದಿ ತಪ್ಪಿಸಲು  ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಈ ಬಗ್ಗೆ ಮಾತನಾಡಿದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದ ಪ್ರಕಾಶ್ ಹುಕ್ಕೇರಿ ಅವರು, ಸುರೇಶ್ ಅಂಗಡಿ ಅವರ ಹೇಳಿಕೆ  ದುರುದ್ದೇಶಪೂರ್ವಕವಾಗಿದ್ದು, ವಿನಾಕಾರಣ ಸೋನಿಯಾ ಗಾಂಧಿ ಅವರ ಹೆಸರನ್ನು ತರಲಾಗಿದೆ. ಇದು ರಾಜ್ಯದ ಸಮಸ್ಯೆಯಾಗಿದ್ದು, ಇಲ್ಲಿ ಯಾವುದೇ ರಾಜಕೀಯ ಮಾಡದೇ ಕೇಂದ್ರ ಸರ್ಕಾರ  ಸಮಸ್ಯೆ ಬಗೆ ಹರಿಸಬೇಕು ಎಂದು ಹೇಳಿದರು.

ಈ ವೇಳೆ ಜೆಡಿಎಸ್ ಸಂಸದ ಪುಟ್ಟರಾಜು ಅವರು ಮಾತನಾಡಿ, ಸಮಸ್ಯೆ ತೀರ ಗಂಭೀರವಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು  ಎಂದು ಆಗ್ರಹಿಸಿದರು. ಪುಟ್ಟರಾಜು ಅವರ ಆಗ್ರಹಕ್ಕೆ ಸಂಸದ ಶ್ರೀರಾಮುಲು, ಪ್ರಕಾಶ್ ಹುಕ್ಕೇರಿ ಸೇರಿದಂತೆ ಇತರೆ ಕರ್ನಾಟಕದ ಸಂಸದರು ಧನಿಗೂಡಿಸಿದರು.

SCROLL FOR NEXT