ಪ್ರತಿಭಟನಾ ಮೆರವಣಿಗೆಯಲ್ಲಿ ತಾರೆಯರು
ಬೆಂಗಳೂರು: ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ವಜಾಗೊಳಿಸಿದ ಮಹದಾಯಿ ನ್ಯಾಯಾಧಿಕರಣದ ತೀರ್ಪು ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಬಹುತೇಕ ಯಶಸ್ವಿಯಾಗಿದ್ದು, ಜನಜೀವನ ಎಂದಿನಂತೆ ಸಹಜ ಸ್ಥಿತಿಗೆ ಮರಳಿದೆ.
ಇಂದು ಬೆಳಗ್ಗೆ 6ಗಂಟೆಯಿಂದ ಸಂಜೆ 5 ಗಂಟೆಯವರೆ ಬಂದ್ ಗೆ ಕರೆ ನೀಡಲಾಗಿತ್ತು. ಕೆಲವು ಜಿಲ್ಲೆಗಳು ಹೊರತುಪಡಿಸಿದರೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಸಣ್ಣಪುಟ್ಟ ಅಹಿತಕರ ಘಟನೆಗಳು ಹಾಗೂ ಕೆಲವು ಕಡೆ ಪೊಲೀಸರ ಲಾಠಿ ಚಾರ್ಜ್ ಹೊರತಾಗಿ ಮುಷ್ಕರ ಬಹುತೇಕ ಶಾಂತಿಯುತವಾಗಿತ್ತು.
ಸಂಜೆ 5ಗಂಟೆಗೆ ಅಧಿಕೃತವಾಗಿ ಬಂದ್ ಹಿಂಪಡೆಯಲಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಬಸ್ ಸಂಚಾರ ಆರಂಭಗೊಂಡಿದೆ. ಅಲ್ಲದೆ ಬೆಂಗಳೂರಿನಲ್ಲಿ 5ಗಂಟೆಯಿಂದಲೇ ಮೆಟ್ರೋ ಸಂಚಾರ ಸಹ ಆರಂಭವಾಗಿದೆ. ಮಾಲ್, ಹೋಟೆಲ್ ಸೇರಿದಂತೆ ಎಲ್ಲಾ ಕಡೆ ಅಂಗಡಿ- ಮುಂಗಟ್ಟುಗಳು ನಿಧಾನವಾಗಿ ತೆರೆದುಕೊಳ್ಳುತ್ತಿವೆ.
ಕನ್ನಡ ಚಲನ ಚಿತ್ರರಂಗದ ವತಿಯಿಂದಲೂ ಮುಷ್ಕರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಮುಷ್ಕರಕ್ಕೆ ಬೆಂಬಲ ನೀಡಿ ಚಿತ್ರರಂಗ ತನ್ನ ಕೆಲಸವನ್ನು ಸ್ಥಗಿತಗೊಳಿಸಿತ್ತು. ಚಿತ್ರೀಕರಣ ನಿಲ್ಲಿಸಿ ನಟರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರು.
ಚಿತ್ರರಂಗದ ಗಣ್ಯರು ಆಯೋಜಿಸಿರುವ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ನಟ ಶಿವರಾಜ್ ಕುಮಾರ್, ರಮೇಶ್, ಗೋಲ್ಡನ್ ಸ್ಟಾರ್ ಗಣೇಶ್, ನಟಿ ಮೇಘನಾ ರಾಜ್, ನಟ ಪ್ರಜ್ವಲ್ ದೇವರಾಜ್, ನಟ ಪಂಕಜ್ ಸೇರಿದಂತೆ ಹಲವು ನಟ ನಟಿಯರು ಪಾಲ್ಗೊಂಡಿದ್ದಾರೆ. ಇನ್ನು ಚಿತ್ರರಂಗದ ಹೋರಾಟಕ್ಕೆ ಕಿರುತೆರೆ ನಟ ನಟಿಯರು ಕೂಡ ಸಾಥ್ ನೀಡಿದ್ದು, ನಟಿ ಹೇಮಾ ಚೌದರಿ, ಚಿತ್ರ ನಟ ಚಿರಂಜೀವಿ ಸರ್ಜಾ, ರಂಗಾಯಣ ರಘು, ಶೃತಿ, ಜಗ್ಗೇಶ್, ಚಿರಂಜೀವಿ ಸರ್ಜಾ, ಜೈಜಗದೀಶ್, ನಿರ್ದೇಶಕ ಶಶಾಂಕ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ಚಿತ್ರರಂಗದ ಈ ಬೃಹತ್ ಪ್ರತಿಭಟನಾ ರ್ಯಾಲಿಗೆ ನಿರ್ಮಾಪಕ ಸಾರಾ ಗೋವಿಂದು ನೇತೃತ್ವ ವಹಿಸಿದ್ದರು, ಟೌನ್ ಹಾಲ್ ನಿಂದ ಆರಂಭವಾಗಿದ್ದ ಬೃಹತ್ ರ್ಯಾಲಿ ಕಾರ್ಪೋರೇಷನ್ ಸರ್ಕಲ್, ಮೈಸೂರು ಬ್ಯಾಂಕ್ ವೃತ್ತ, ಸರ್ಕಾರಿ ಕಲಾ ಕಾಲೇಜು ಮೂಲಕ ಫ್ರೀಡಂ ಪಾರ್ಕ್ ತಲುಪಿತು. ಇನ್ನು ರ್ಯಾಲಿಯಲ್ಲಿ ಪಾಲ್ಗೊಂಡಿರುವ ತಮ್ಮ ನೆಚ್ಚಿನ ನಟ-ನಟಿಯರನ್ನು ನೋಡಲು ಸಾವಿರಾರು ಅಭಿಮಾನಿಗಳು ಕೂಡ ನೆರೆದಿದ್ದು, ರ್ಯಾಲಿ ಸಾಗುತ್ತಿರುವ ದಾರಿಯುದ್ದಕ್ಕೂ ಘೋಷಣೆಗಳನ್ನು ಕೂಗುತ್ತಿದ್ದರು.