ಪ್ರಧಾನ ಸುದ್ದಿ

ಪೊಲೀಸರಿಂದ ಜನರಿಗೆ ತೊಂದರೆಯಾಗಿದ್ದರೆ ಕ್ಷಮೆಯಾಚಿಸುತ್ತೇನೆ: ಪರಮೇಶ್ವರ

Lingaraj Badiger
ಬೆಂಗಳೂರು: ಮಹದಾಯಿ ನ್ಯಾಯಾಧಿಕಣರ ತೀರ್ಪು ವಿರೋಧಿಸಿ ಶನಿವಾರ ನಡೆದ ಪ್ರತಿಭಟನೆ ವೇಳೆ ಪೊಲೀಸರಿಂದ ಜನರಿಗೆ ತೊಂದರೆಯಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಭಾನುವಾರ ಹೇಳಿದ್ದಾರೆ.
ಇಂದು ಸದಾಶಿವನಗರದ ತಮ್ಮ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪರಮೇಶ್ವರ, ನವಲಗುಂದ ತಾಲೂಕಿನ ಯಮನೂರಿನಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲೆ ನಡೆದ ಪೊಲೀಸ್ ದೌರ್ಜನ್ಯದ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಅಲ್ಲದೆ ತಾಯಂದಿರು ಮತ್ತು ಮಕ್ಕಳಲ್ಲಿ ಕ್ಷಮೆಯಾಚಿಸಿದರು.
ನವಲಗುಂದ ಹಾಗೂ ನರಗುಂದದಲ್ಲಿ ನಡೆದ ಲಾಠಿ ಚಾರ್ಚ್ ಬಗ್ಗೆ ವಿಡಿಯೋ ನೋಡಿ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆ ವಿಡಿಯೋವನ್ನು ತಿರುಚಲುಬಹುದು ಎಂದು ಗೃಹ ಸಚಿವರು ಪೊಲೀಸ್ ಲಾಠಿ ಚಾರ್ಚ್ ನ್ನು ಸಮರ್ಥಿಸಿಕೊಂಡರು.
ಪೊಲೀಸ್ ದೌರ್ಜನ್ಯದ ಬಗ್ಗೆ ಎಡಿಜಿಪಿ ಕಮಲ್ ಪಂಥ್ ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದ್ದು, ಒಂದು ವಾರದಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪರಮೇಶ್ವರ ತಿಳಿಸಿದರು.
ಉದ್ರಿಕ್ತರು ನವಲಗುಂದ ಹಾಗೂ ನರಗುಂದದಲ್ಲಿ ಸರ್ಕಾರಿ ಕಚೇರಿಗಳ ಆಸ್ತಿಪಾಸ್ತಿ ಧ್ವಂಸಗೊಳಿಸಿದ್ದು, ಕಚೇರಿಗಳಲ್ಲಿ ಹಲವು ದಾಖಲೆಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದರು.
ಮಹದಾಯಿ ಹೋರಾಟದ ವೇಳೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಯಮನೂರಿನಲ್ಲಿ ಪೊಲೀಸರು ರೈತರ ಮನೆಗಳಿಗೆ ನುಗ್ಗಿ ಮಕ್ಕಳು, ಹೆಂಗಸರು, ಗರ್ಭಿಣಿಯರು, ವೃದ್ಧರು ಎನ್ನದೆ ಕಂಡ,ಕಂಡವರ ಮೇಲೆ ಲಾಠಿ ಪ್ರಹಾರ ನಡೆಸಿದ್ದು, ಮನಸೋ ಇಚ್ಛೆ ಥಳಿಸಿದ್ದರು. ಇದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
SCROLL FOR NEXT