ಬೆಂಗಳೂರು: ಕೇಂದ್ರ ಸರ್ಕಾರಿ ನೌಕರರ ಮಾದರಿಯಲ್ಲೇ ರಾಜ್ಯ ಸರ್ಕಾರಿ ನೌಕರರಿಗೂ ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಗುರುವಾರ ಕಚೇರಿಗಳಿಗೆ ಗೈರು ಆಗುವ ಮೂಲಕ ಒಂದು ದಿನದ ಮುಷ್ಕರ ನಡೆಸುತ್ತಿದ್ದಾರೆ.
ಇದರಿಂದಾಗಿ ಆಡಳಿತದ ಶಕ್ತಿಸೌಧ ಎನಿಸುವ ವಿಧಾನ ಸೌಧ, ವಿಕಾಸಸೌಧ, ಎಂ.ಎಸ್.ಬಿಲ್ಡಿಂಗ್ ಸೇರಿದಂತೆ ರಾಜ್ಯಾದ್ಯಂತ ಎಲ್ಲ ಸರ್ಕಾರಿ ಕಚೇರಿಗಳ ದೈನಂದಿನ ಕಾರ್ಯಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿವೆ.
ವೇತನ ತಾರತಮ್ಯ ಪರಿಹರಿಸಬೇಕೆಂಬ ಬಹುದಿನಗಳ ಬೇಡಿಕೆಗೆ ಸ್ಪಂದಿಸದ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಸರ್ಕಾರಿ ನೌಕರರ ಸಂಘ ಇಂದು ರಾಜ್ಯಾದ್ಯಂತ ಮುಷ್ಕರ ಹಮ್ಮಿಕೊಂಡಿವೆ. ಇಷ್ಟಿದ್ದರೂ ಇಲ್ಲಿಯವರೆಗೆ ಸುಮ್ಮನಿದ್ದ ಸರ್ಕಾರ ಬುಧವಾರ ದಿಢೀರ್ ಎಚ್ಚೆತ್ತುಕೊಂಡು ಪ್ರತಿಭಟನೆ ಹತ್ತಿಕ್ಕುವುದಕ್ಕಾಗಿ ಕಾನೂನು ಕ್ರಮದ ಬೆದರಿಕೆಯೊಡ್ಡಿ ಸುತ್ತೋಲೆ ಹೊರಡಿಸಿತ್ತು. ಆದರೆ ಸರ್ಕಾರದ ಎಚ್ಚರಿಕೆಗೆ ಮಣಿಯದ ನೌಕರರು ಕೆಲಸಕ್ಕೆ ಗೈರು ಆಗುವ ಮೂಲಕ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ.
ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಎಲ್ಲಾ ಸರ್ಕಾರಿ ನೌಕರರು ರಜೆ ಹಾಕದೆ ಗೈರು ಹಾಜರಾಗಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಕರೆ ನೀಡಿದೆ. ಹೀಗಾಗಿ ಸರ್ಕಾರಿ ನೌಕರರು ಕಚೇರಿಗೆ ಹಾಜರಾಗದೆ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ಸರ್ಕಾರಿ ನೌಕರರ ಸಂಘದ ಕರೆಗೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಆದರೆ, ಆಸ್ಪತ್ರೆಗಳ ಔಷಧ ವಿತರಕರು, ತುರ್ತು ಚಿಕಿತ್ಸಾ ಸೇವಾ ವಿಭಾಗ, ಶಸ್ತ್ರ ಚಿಕಿತ್ಸಾ ವಿಭಾಗ ಸೇರಿ ದಂತೆ ಅತ್ಯಾವಶ್ಯಕ ಸೇವೆಗಳ ಸರ್ಕಾರಿ ನೌಕರರು ಮುಷ್ಕರವಿದ್ದರೂ ಸೇವೆ ಸಲ್ಲಿಸುತ್ತಿದ್ದಾರೆ.