ಪ್ರಧಾನ ಸುದ್ದಿ

ಜೂ.4ರಂದು ಪೊಲೀಸರು ಸಾಮೂಹಿಕ ರಜೆ ಹಾಕುವುದಿಲ್ಲ: ಓಂ ಪ್ರಕಾಶ್‌

Lingaraj Badiger
ಬೆಂಗಳೂರು: ಜೂನ್ 4ರಂದು ಪೊಲೀಸರು ಸಾಮೂಹಿಕ ರಜೆ ಹಾಕುವುದಿಲ್ಲ. ರಾಜ್ಯ ಪೊಲೀಸ್‌ ಇಲಾಖೆ ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್‌ ಅವರು ಗುರುವಾರ ಸ್ಪಷ್ಟಪಡಿಸಿದ್ದಾರೆ.
ಪೋಲಿಸ್ ಪ್ರತಿಭಟನೆಗೆ ಸಂಬಂಧಿಸಿದಂತೆ ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಓಂ ಪ್ರಕಾಶ್ ಅವರು, ಜೂನ್‌ 4 ರಂದು ಪೊಲೀಸ್‌ ಇಲಾಖೆ ಎಂದಿನಂತೆ ಕಾರ್ಯ ನಿರ್ವಹಿಸಲಿದೆ. ಸಾರ್ವಜನಿಕರು ಗೊಂದಲಕ್ಕೀಡಾಗುವ ಅಗತ್ಯವಿಲ್ಲ. ಈ ಕುರಿತಾಗಿ ಎಲ್ಲಾ ಜಿಲ್ಲೆಗಳ ಹಿರಿಯ ಪೊಲೀಸ್‌ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಗಿದೆ ಎಂದರು.
ಪೊಲೀಸರು ಶಿಸ್ತಿನ ಸಿಪಾಯಿಗಳು. ಅನಗತ್ಯವಾಗಿ ನಮ್ಮ ಇಲಾಖೆಯಲ್ಲಿ ಸಮಸ್ಯೆ ಸೃಷ್ಟಿಸಲು ಹೊರಗಿನ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನ ಪಡುತ್ತಿರುವ ಬಗ್ಗೆ ತಿಳಿದು ಬಂದಿದ್ದು. ಈ ಕುರಿತು ತನಿಖೆ ನಡೆಸಲಾಗುವುದು ಎಂದರು. ಅಲ್ಲದೆ ನಮ್ಮ ಇಲಾಖೆ ಒಂದು ಕುಟುಂಬ ಇದ್ದಂತೆ,ಇಲ್ಲಿ ಸಮಸ್ಯೆ ಸೃಷ್ಟಿಸಲು ಯತ್ನಿಸಿದರೆ ಮುಲಾಜಿಲ್ಲದೆ ಕ್ರಮಕೈಗೊಳ್ಳುತ್ತೇವೆ ಎಂದು ಪೊಲೀಸ್ ಮಹಾ ನಿರ್ದೇಶಕರು ಎಚ್ಚರಿಸಿದರು.
ಇಲಾಖೆಯಲ್ಲಿ ಒಂದು ವ್ಯವಸ್ತೆ ಇದೆ ,ಯಾವುದೇ ಸಮಸ್ಯೆ ಇದ್ದೂರೂ ಅದನ್ನು ಇಲಾಖೆಯ ಮಿತಿಯಲ್ಲೇ ಪರಿಹಾರ ಮಾಡಲಾಗುತ್ತದೆ. ಈಗಾಗಲೇ ಪೊಲೀಸರ ಹಲವು ಸಮಸ್ಯೆಗಳನ್ನು ನಾವು ಪರಿಹರಿಸಿದ್ದೇವೆ ಎಂದರು. 
ಇದೇ ವೇಳೆ ಪೋಲಿಸ್ ಪ್ರತಿಭಟನೆಗೆ ಕರೆ ನೀಡಿದ್ದ ಅಖೀಲ ಕರ್ನಾಟಕ ಪೊಲೀಸ್‌ ಮಹಾ ಸಂಘದ ಅಧ್ಯಕ್ಷ ಶಶಿಧರ್‌ ಒಬ್ಬ ಸ್ವಯಂ ಘೋಷಿತ ಮುಖಂಡ ಎಂದು ಒಂ ಪ್ರಕಾಶ್‌ ಹೇಳಿದರು. ಆ ವ್ಯಕ್ತಿ ಈ ಹಿಂದೆ ಪೇದೆ ಕೆಲಸದಿಂದ ವಜಾಗೊಂಡಿದ್ದ ಎಂದರು. 
ಪೊಲೀಸ್ ಪ್ರತಿಭಟನೆ ಪ್ರಚೋದನೆ ನೀಡಿದ ಆರೋಪದ ಮೇಲೆ ಶಶಿಧರ ಅವರನ್ನು ಇಂದು ಬೆಳಗ್ಗೆ ಪೊಲೀಸರು ಬಂಧಿಸಿದ್ದು, ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
SCROLL FOR NEXT