ವಾಷಿಂಗ್ಟನ್: ಜಾಗತಿಕ ಅಭಿವೃದ್ಧಿ ಹಾಗೂ ಭದ್ರತಾ ಸಾವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಸಾಮರ್ಥ್ಯವನ್ನು ವೃದ್ದಿಗೊಳಿಸಬೇಕು ಎಂದು ಭಾರತ ಮತ್ತು ಅಮೆರಿಕ ದೇಶಗಳು ಹೇಳಿವೆ.
ಅಮೆರಿಕ ಪ್ರವಾಸದಲ್ಲಿರುವ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ 3ನೇ ಪ್ರಮುಖ ದ್ವಿಪಕ್ಷೀಯ ಶೃಂಗಸಭೆ ಚರ್ಚೆ ಬಳಿಕ ಉಭಯ ನಾಯಕರು ಜಂಟೀ ಹೇಳಿಕೆ ನೀಡಿದ್ದು, ಜಾಗತಿಕ ಅಭಿವೃದ್ಧಿ ಹಾಗೂ ಭಯೋತ್ಪಾದನೆಯಂತಹ ಭದ್ರತಾ ಸಾವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಸಾಮರ್ಥ್ಯವನ್ನು ವೃದ್ದಿಗೊಳಿಸಲು ಕರೆ ನೀಡಿದರು. ಅಂತೆಯೇ ಈ ನಿಟ್ಟಿನಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಶ್ವತ ಸದಸ್ಯರ ಪಟ್ಟಿಯನ್ನು ಪರಿಷ್ಕರಿಸಬೇಕಿದೆ ಎಂದು ಉಭಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
2015ರ ಸೆಪ್ಟೆಂಬರ್ ನಲ್ಲಿ ಮಾಡಿಕೊಳ್ಳಲಾಗಿದ್ದ ಐತಿಹಾಸಿಕ 2030 ಸುಸ್ಥಿರ ಅಭಿವೃದ್ಧಿ (ಸಂಪನ್ಮೂಲಗಳನ್ನು ಅವುಗಳ ಪುನರ್ ಬಳಕೆಯ ದೃಷ್ಟಿಯಿಂದ ಪರಿಸರ ಮಾಲಿನ್ಯಗೊಳ್ಳದಂತೆ ಬಳಸುವ ತಂತ್ರ) ಅಜೆಂಡಾವನ್ನು ಕೂಡ ಅಳವಡಿಕೆ ಮಾಡಿಕೊಳ್ಳುವ ಮೂಲಕ ಸುಸ್ಥಿರ ಅಭಿವೃದ್ಧಿ ಗುರಿಯ ಪರಿಣಾಮಕಾರಿ ಸಾಧನೆಯತ್ತ ಉಭಯ ದೇಶಗಳು ಹೆಜ್ಜೆಹಾಕಿವೆ. ಇದೇ ವೇಳೆ ವಿಶ್ವಶಾಂತಿ ಕಾಪಾಡುವ ನಿಟ್ಟಿನಲ್ಲಿ ಸಂಸ್ಥೆಯ ಭದ್ರತಾ ಮಂಡಳಿ ನಿರ್ಣಾಯಕ ಪಾತ್ರವಹಿಸುವುದು ಮತ್ತು ಉಭಯ ನಾಯಕರು ಭದ್ರತಾ ಮಂಡಳಿಯ ಸದಸ್ಯತ್ವ ದೇಶಗಳ ಪಟ್ಟಿ ಪರಿಷ್ಕರಣೆ ಸೇರಿದಂತೆ ಭದ್ರತಾ ಮಂಡಳಿಯ ಆಂತರಿಕ ವಿಚಾರವಿನಿಮಯ ಸಮಿತಿ ಸದಸ್ಯರ ಪಟ್ಟಿಯನ್ನು ಪರಿಷ್ಕರಿಸುವ ಕುರಿತು ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಅಂತೆಯೇ ಉಭಯ ದೇಶಗಳು ವಿಶ್ವಸಂಸ್ಥೆಯ ಶಾಂತಿಪರಿಪಾಲನಾ ಕಾರ್ಯಾಚರಣೆಗಳ ಸಾಮರ್ಥ್ಯ ವೃದ್ಧಿ ಬೆಂಬಲಕ್ಕೆ ಬದ್ಧವಾಗಿದ್ದು, ಅಫ್ರಿಕಾ ಖಂಡದ ಸರ್ವತೋಮುಖ ಅಭಿವೃದ್ಧಿ ಹಾಗೂ ಭದ್ರತೆಗೆ ಬದ್ಧವಾಗಿರುವ ನಿರ್ಣಯ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.