ಪ್ರಧಾನ ಸುದ್ದಿ

ಹಗರಣ ಸಾಬೀತಾದರೆ ಜೈಲಿಗೆ ಹೋಗಲು ಸಿದ್ಧ: ಎಎಪಿ ಸಚಿವ

Guruprasad Narayana

ನವದೆಹಲಿ: ದೆಹಲಿ ಸರ್ಕಾರದ, ಮೊಬೈಲ್ ಆಪ್ ಮೂಲದ ಬಸ್ ಸೇವಾ ಯೋಜನೆಯಲ್ಲಿ ಹಗರಣ ನಡೆದಿರುವುದು ಸಾಬೀತಾದರೆ ಜೈಲಿಗೆ ಹೋಗಲು ಸಿದ್ಧ ಎಂದು ಸಾರಿಗೆ ಸಚಿವ ಗೋಪಾಲ್ ರೈ ಹೇಳಿದ್ದಾರೆ. ಈ ಸೇವೆಗಾಗಿ ಒಬ್ಬ ಸೇವಾದಾರನಿಗೆ ನಿಯಮಗಳನ್ನು ಮೀರಿ ಉಪಕಾರ ಮಾಡಲಾಗಿದೆ ಎಂಬ ಆರೋಪದಿಂದ ಈ ಯೋಜನೆ ಸದ್ಯಕ್ಕೆ ಸ್ಥಗಿತಗೊಂಡಿದೆ.

"ಈ ಯೋಜನೆಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಈ ಆಪ್ ಮೂಲದ ಪ್ರೀಮಿಯಮ್ ಬಸ್ ಸೇವೆಯಲ್ಲಿ ಹಗರಣ ನಡೆದಿರುವುದು ಸಾಬೀತು ಪಡಿಸಿದರೆ ನಾನು ಜೈಲಿಗೆ ಹೋಗಲು ಸಿದ್ಧ" ಎಂದು ರೈ ವರದಿಗಾರರಿಗೆ ತಿಳಿಸಿದ್ದಾರೆ.

ಎರಡನೇ ಹಂತರ ಸಮ-ಬೆಸ ವಾಹನ ಚಾಲನೆಯ ಯೋಜನೆಯ ಸಮಯದಲ್ಲಿ, ಜೂನ್ ಮಧ್ಯಂತರಕ್ಕೆ ಆಪ್ ಮೂಲದ ಪ್ರೀಮಿಯಮ್ ಬಸ್ ಸೇವೆಗೆ ಚಾಲನೆ ನೀಡುವುದಾಗಿ ದೆಹಲಿ ಸರ್ಕಾರ ಘೋಷಿಸಿತ್ತು.

ಇದಕ್ಕಾಗಿ ಜೂನ್ ೧ ರಿಂದ ನೊಂದಣಿ ಪ್ರಾರಂಭವಾಗಿತ್ತು. ಆದರೆ ಈ ಸೇವೆಗೆ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅಸ್ತು ನೀಡದೆ ಪರಿಶೀಲನೆ ಮಾಡಲು ತಿಳಿಸಿದ್ದಕ್ಕಾಗಿ ಚಾಲನೆ ನೀಡಲು ಸಾಧ್ಯವಾಗಿಲ್ಲ.

ಭ್ರಷ್ಟಾಚಾರ ವಿರೋಧಿ ಬ್ಯೂರೋ (ಎ ಸಿ ಬಿ)ಗೆ ದೂರು ಸಲ್ಲಿಸಿರುವ ಭಾರತೀಯ ಜನತಾ ಪಕ್ಷದ ಶಾಸಕ ವಿಜೇಂದ್ರ ಗುಪ್ತಾ, ಎಲ್ಲ ನಿಯಮಗಳನ್ನು ಪಾಲಿಸದೆ, ಸೇವಾದರನೊಬ್ಬನಿಗೆ ಉಪಕಾರ ಮಾಡಲಾಗಿದೆ ಎಂದಿದ್ದರು.

ಗುಪ್ತಾ ಅವರ ದೂರಿಗೆ ಸ್ಪಷ್ಟೀಕರಣ ನೀಡಲು ರೈ ಅವರು ಎಸಿಬಿ ಕಚೇರಿಗೆ ಮಂಗಳವಾರ ಭೇಟಿ ನೀಡಲಿದ್ದಾರೆ.

ತಮ್ಮ ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ಲೆಫ್ಟಿನೆಂಟ್ ಗವರ್ನರ್ ಜಂಗ್ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ದೂರಿದೆ.

SCROLL FOR NEXT