ಕಾಗೆ ಕುಳಿತಿದ್ದ ಸಿಎಂ ಹಳೆ ಕಾರು, ಬಲಚಿತ್ರದಲ್ಲಿ ಸಿಎಂ ಹೊಸ ಕಾರು
ಬೆಂಗಳೂರು: ಮೂಢ ನಂಬಿಕೆಗಳನ್ನು ನಂಬುವುದಿಲ್ಲ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಾವು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಕಾಗೆ ಕೂತಿದ್ದಕ್ಕಾಗಿ ಕಾರು ಬದಲಾವಣೆ ಮಾಡಿಲ್ಲ ಎಂದು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ಇಂದು ಬೆಳಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ, ತಮ್ಮ ಕಾರು ಬದಲಿಸುವ ವಿಚಾರ ಎರಡು ತಿಂಗಳ ಹಿಂದಿನಿಂದ ನಡೆಯುತ್ತಿದೆ. ಆದರೆ ಈಗ ಕಾರಿಗೂ ಕಾಗೆಗೂ ಸಂಬಂಧ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ನಾನು ಬಳಸುವ ಸರ್ಕಾರಿ ಕಾರು ಈಗಾಗಲೇ ಎರಡು ಲಕ್ಷ ಕಿ.ಮೀ.ಗೂ ಹೆಚ್ಚು ಸಂಚರಿಸಿದೆ. ಜೊತೆಗೆ ಸ್ವಲ್ಪ ಮಟ್ಟಿನಲ್ಲಿ ತಾಂತ್ರಿಕ ಸಮಸ್ಯೆ ಇದ್ದುದರಿಂದ ಕಾರು ಬದಲಾವಣೆ ಮಾಡಬೇಕಾಯಿತು ಎಂದು ಸಿಎಂ ತಿಳಿಸಿದರು.
ನಾನು ಮೌಢ್ಯಗಳನ್ನು ನಂಬುವುದಿಲ್ಲ. ಒಂದು ವೇಳೆ ನಂಬುತ್ತಿದ್ದರೆ ಮುಖ್ಯಮಂತ್ರಿ ಸ್ಥಾನ ಹೋಗುತ್ತದೆ ಎಂಬ ಕಾರಣಕ್ಕೆ ಚಾಮರಾಜನಗರಕ್ಕೆ ಆರು ಬಾರಿ ಹೋಗುತ್ತಿರಲಿಲ್ಲ. ರಾಹುಕಾಲದಲ್ಲಿ ಬಜೆಟ್ ಮಂಡನೆಗೆ ಮುಂದಾಗುತ್ತಿರಲಿಲ್ಲ. ಅಷ್ಟೇ ಏಕೆ? ಅಮಾವಾಸ್ಯೆ ದಿನದಂದು (ಜುಲೈ 4) ವಿಧಾನ ಮಂಡಲ ಅಧಿವೇಶನಕ್ಕೆ ದಿನಾಂಕ ನಿಗದಿ ಮಾಡುತ್ತಿರಲಿಲ್ಲ ಎಂದರು.
ಇದೇ ವೇಳೆ, ಸರ್ಕಾರ ಇನ್ನಾದರೂ ಜನರ ಬಳಿಗೆ ಹೋಗಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಬರಗಾಗಲಕ್ಕೆ ತುತ್ತಾಗಿರುವ 16 ಜಿಲ್ಲೆಗಳಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಆಲಿಸಿದ್ದೇನೆ. ಯಾವ ಸಿಎಂ ಕೂಡ ಬರಗಾಲದ ಸಂದರ್ಭದಲ್ಲಿ ಇಷ್ಟು ಜಿಲ್ಲೆಗಳಿಗೆ ಹೋದ ಇತಿಹಾಸವಿಲ್ಲ. ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದರು.