ಪ್ರಧಾನ ಸುದ್ದಿ

ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ತರಲು ಸರ್ಕಾರ ಸಿದ್ಧ: ಸಿಎಂ ಸಿದ್ದರಾಮಯ್ಯ

Lingaraj Badiger
ಬೆಂಗಳೂರು: ಜನರನ್ನು ಶೋಷಿಸುತ್ತಿರುವ ಮೌಢ್ಯಾಚಾರಣೆಗಳನ್ನು ನಿರ್ಬಂಧಿಸಲು ಮೌಢ್ಯ ಪ್ರತಿಬಂಧಕ ಕಾಯಿದೆ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.
ಇಂದು ಅಂಬೇಡ್ಕರ್ ಭವನದಲ್ಲಿ ಪ್ರಗತಿಪರ ಮಠಾಧೀಶರ ವೇದಿಕೆ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 125ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಸಿಎಂ, ಸಾವಿರಾರು ವರ್ಷಗಳಿಂದ ಉಳಿದುಕೊಂಡಿರುವ ಅಸ್ಪೃಶ್ಯತೆ ಇವತ್ತಿಗೂ ಬದಲಾಗಿಲ್ಲ. ಸರ್ಕಾರ ಇದರ ಬದಲಾವಣೆಗೆ ಪ್ರಯತ್ನಿಸಿದರೆ, ರಾಜಕೀಯ ಬಣ್ಣ ಹಚ್ಚುವವರಿದ್ದಾರೆ. ಹಾಗಾಗಿ ಪ್ರಗತಿಪರ ಮಠಾಧೀಶರೇ ಅಸ್ಪೃಶ್ಯತೆ ತೊಡೆದುಹಾಕಲು ಮುಂದಾಗಬೇಕು ಎಂದರು.
ಸಮಾಜದಲ್ಲಿ ಬದಲಾವಣೆ ತರಬೇಕಾದರೆ, ಅಸಮಾನತೆಯನ್ನು ತೊಡೆದು ಹಾಕಬೇಕಾದರೆ, ಸಂವಿಧಾನವನ್ನು ಅಕ್ಷರಶಃ ಜಾರಿಗೆ ತಂದರೆ ಸಾಕು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.
ಇದೇ ವೇಳೆ ಕಾಗೆ ಕೂಳಿತಿದ್ದಕ್ಕೆ ನಾನು ನನ್ನ ಕಾರನ್ನು ಬದಲಾಯಿಸಲಿಲ್ಲ. ಆ ಕಾರನ್ನು ಕಳೆದ ಮೂರು ವರ್ಷಗಳಿಂದ ಬಳಸಿದ್ದೇನೆ. ಅಲ್ಲದೆ ಎರಡು ತಿಂಗಳ ಹಿಂದೆಯೇ ಹೊಸ ಕಾರು ಬುಕ್ ಮಾಡಿದ್ದೆ ಎಂದರು. 
ನಾನು ಇಂತಹ ಮೌಢ್ಯಗಳನ್ನು ನಂಬುವುದಿಲ್ಲ. ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎಂದು ಜನ ಹೇಳುತ್ತಾರೆ. ಆದರೆ ಇದುವರೆಗೂ ನಾನು ಅಧಿಕಾರ ಕಳೆದುಕೊಂಡಿಲ್ಲ ಮತ್ತು ಮುಂದೆ ಕಳೆದುಕೊಳ್ಳುವುದೂ ಇಲ್ಲ. ಇನ್ನೂ ಎರಡು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ಅಷ್ಟೇ ಅಲ್ಲ ವಿಧಾನಸಭೆ ಚುನಾವಣೆಯ ಬಳಿಕವೂ ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದರು.
ಇದಕ್ಕೂ ಮುನ್ನ ಪ್ರಾಸ್ತಾವಿಕ ಭಾಷಣ ಮಾಡಿದ್ದ ನಿಡುಮಾಮಿಡಿ ಮಹಾಸಂಸ್ಥಾನದ ಮಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿರವರು, ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಮೂಢನಂಬಿಕೆ ಪ್ರತಿಬಂಧಕಾ ಕಾಯ್ದೆಯನ್ನು ಮಂಡಿಸಬೇಕು ಎಂದು ಆಗ್ರಹಿಸದ್ದರು.
ಸಮಾರಂಭದಲ್ಲಿ ಸಚಿವರಾದ ಟಿ.ಬಿ. ಜಯಚಂದ್ರ, ಹೆಚ್.ಕೆ. ಪಾಟೀಲ್, ಕೆ.ಜೆ. ಜಾರ್ಜ್, ‌ಡಾ. ಹೆಚ್.ಸಿ. ಮಹದೇವಪ್ಪ, ರೋಷನ್ ಬೇಗ್, ಹೆಚ್. ಆಂಜನೇಯ, ರುದ್ರಪ್ಪ ಲಮಾಣಿ ಹಾಗೂ ವಿವಿಧ ಮಠಗಳ ನೂರಾರು ಮಠಾಧ್ಯಕ್ಷರು ಭಾಗವಹಿಸಿದ್ದರು.
SCROLL FOR NEXT