ಬೀಜಿಂಗ್: ಒಂದು ಕಡೆ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಭಾರತದ ಪರಮಾಣು ಪೂರೈಕೆದಾರರ ಒಕ್ಕೂಟ(ಎನ್‌ಎಸ್‌ಜಿ)ಸದಸ್ಯತ್ವಕ್ಕೆ ಚೀನಾ ವಿರೋಧಿಸುತ್ತಿಲ್ಲ ಎಂದು ಹೇಳಿದ್ದಾರೆ. ಆದರೆ ಸಿಯೋಲ್ ನಡೆಯುವ ಎನ್ಎಸ್ಜಿ ಸಭೆಯ ಕಾರ್ಯಸೂಚಿಯಲ್ಲಿ ಭಾರತಕ್ಕೆ ಸದಸ್ಯತ್ವ ನೀಡುವ ವಿಚಾರ ಇಲ್ಲ ಎಂದು ಚೀನಾ ಸೋಮವಾರ ಹೇಳಿದೆ.
ಎನ್ಎಸ್ಜಿ ಸದಸ್ಯರು ಇನ್ನೂ ಇಬ್ಭಾಗವಾಗಿಯೇ ಇದ್ದಾರೆ. ಆದ್ದರಿಂದ ಯಾವುದೇ ಹೊಸ ರಾಷ್ಟ್ರದ ಪ್ರವೇಶ ಬಗ್ಗೆ ಮಾತನಾಡಲು ಈಗ ಕಾಲ ಪಕ್ವವಲ್ಲ ಮತ್ತು ಆ ಬಗ್ಗೆ ವಿಸ್ತೃತ ಚರ್ಚೆಯ ನಂತರ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುಯಿಂಗ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇದೇ ವೇಳೆ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ ಜೈಶಂಕರ್ ಭೇಟಿ ಮತ್ತು ಸುಷ್ಮಾ ಸ್ವರಾಜ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಚುಯಿಂಗ್, ಜೂನ್ 24ರಂದು ಸಿಯೋಲ್ ನಲ್ಲಿ ನಡೆಯುವ 48 ಸದಸ್ಯರ ಎನ್ಎಸ್ ಜಿ ಸಭೆಯ ಕಾರ್ಯಸೂಚಿಯಲ್ಲಿ ಭಾರತಕ್ಕೆ ಸದಸ್ಯತ್ವ ನೀಡುವ ಪ್ರಸ್ತಾಪ ಇಲ್ಲ ಎಂದರು.
ನಿನ್ನೆ ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದ ಸುಷ್ಮಾ ಸ್ವರಾಜ್, ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವ ನೀಡುವುದಕ್ಕೆ ಚೀನಾ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಕೆಲ ಪ್ರಕ್ರಿಯೆ ಹಾಗೂ ಮಾನದಂಡದ ಬಗ್ಗೆ ಆ ದೇಶದ ಪ್ರತಿನಿಧಿಗಳು ಅಭಿಪ್ರಾಯಗಳನ್ನಷ್ಟೇ ವ್ಯಕ್ತಪಡಿಸುತ್ತಿದ್ದಾರೆ ಎಂದಿದ್ದರು. ಅಲ್ಲದೆ ಈ ವಷಾ೯೦ತ್ಯದಲ್ಲಿ ಭಾರತ ಎನ್‍ಎಸ್‍ಜಿ ಸದಸ್ಯತ್ವ ಪಡೆದುಕೊಳ್ಳಲಿದೆ ಎ೦ದು ವಿಶ್ವಾಸ ವ್ಯಕ್ತಪಡಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics