ಪ್ರಧಾನ ಸುದ್ದಿ

ತಂದೆ ಕಳೆದುಕೊಂಡ ದುಃಖದ ಮಡುವಿನಲ್ಲಿ ವೈದ್ಯಕೀಯ ಕಾಲೇಜು ಪ್ರವೇಶ ಪಡೆದ ರಕ್ಷಣಾ

Guruprasad Narayana

ಚೆನ್ನೈ: ಮಂಗಳವಾರ ಮೊದಲ ಸುತ್ತಿನ ಆಯ್ಕೆ ಪ್ರಕ್ರಿಯೆಯಲ್ಲಿ ಎಂ ಬಿ ಬಿ ಎಸ್ ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಖುಷಿಯಿಂದ ಕುಣಿದು ಕುಪ್ಪಳಿಸುತ್ತಿದ್ದರೆ, ಸರ್ಕಾರಿ ಕಾಲೇಜಿನಲ್ಲಿ ವೈದ್ಯಕೀಯ ಕೋರ್ಸ್ ಪ್ರವೇಶ ಪಡೆದರೂ ದುಃಖದಲ್ಲೇ ಮುಳುಗಿದ್ದವರು ಎಂ ರಕ್ಷಣಾ. ಕರ್ತವ್ಯದಲ್ಲಿದ್ದಾಗ ಸರಗಳ್ಳರ ಇರಿತಕ್ಕೆ ಬಲಿಯಾದ ಹೊಸೂರಿನ ಪೊಲೀಸ್ ಪೇದೆ ಮುನಿಸ್ವಾಮಿಯವರ ಪುತ್ರಿ ಇವರು.

ರಕ್ಷಣಾ ಅವರ ಅಂಕ 198.25 ಇದ್ದು ಸಾಮಾನ್ಯ ರ್ಯಾಂಕ್ 565. ಅವರಿಗೆ ಮಧುರೈ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಪ್ರವೇಶ ದೊರೆತಿದೆ. ಅವರಿಗೆ ಈ ಪ್ರವೇಶ ಸಿಕ್ಕಿದಾಕ್ಷಣ ಖುಷಿಯಾಗದೆ ಕಣ್ಣಿನಲ್ಲಿ ನೀರು ತುಂಬಿಕೊಂಡಿದ್ದ ಮನಕಲಕುವ ದೃಶ್ಯ, ಕೌನ್ಸಲಿಂಗ್ ಕೇಂದ್ರದಲ್ಲಿ ನಿರ್ಮಾಣವಾಗಿತ್ತು.

ರಕ್ಷಣಾ ಮತ್ತು ಅವರ ತಾಯಿ ವಿ ಮುನಿಲಕ್ಷ್ಮಿಯವರನ್ನು ಪೊಲೀಸರು ಹೊಸೂರಿನಿಂದ ಕೌನ್ಸಲಿಂಗ್ ಕೇಂದ್ರಕ್ಕೆ ಕರೆತಂದಿದ್ದರು. ಈ ಸಮಯದಲ್ಲಿ ಮಾತನಾಡಿನ ಮುನಿಲಕ್ಷ್ಮಿ "ಮದ್ರಾಸ್ ವೈದ್ಯಕೀಯ ಕಾಲೇಜಿನಲ್ಲಿ ಮಗಳಿಗೆ ಸೀಟು ಸಿಕ್ಕರೆ ಒಳ್ಳೆಯದು. ಏಕೆಂದರೆ ನಮ್ಮ ಬಂಧುಗಳು ಮತ್ತು ಮಗಳ ಗೆಳತಿಯರು ಚೆನ್ನೈನಲ್ಲಿದ್ದಾರೆ. ಈ ವಿಷಯವಾಗಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ" ಎಂದರು.

ಮದ್ರಾಸ್ ವೈದ್ಯಕೀಯ ಕಾಲೇಜಿನಲ್ಲಿ 36 ಸೀಟುಗಳು ಬಿಸಿ ವರ್ಗಕ್ಕೆ ಮೀಸಲಾಗಿದ್ದವು. ರಕ್ಷಣಾ ಅವರ ಸರದಿ ಬರುವ ಹೊತ್ತಿಗೆ ಅವೆಲ್ಲವೂ ಭರ್ತಿಯಾಗಿದ್ದವು.

"ರಕ್ಷಣಾ ಯಾವತ್ತೂ ಓದಿನಲ್ಲಿ ಮುಂದಿದ್ದಳು. 10 ನೇ ತರಗತಿಯಲ್ಲಿ ರಾಜ್ಯಕ್ಕೆ ಮೂರನೇ ರ್ಯಾಂಕ್ ಗಳಿಸಿದ್ದಳು ಮತ್ತು 12 ನೇ ತರಗತಿಯಲ್ಲಿ ಒಟ್ಟು 1182 ಅಂಕ ಗಳಿಸಿದ್ದಳು" ಎಂದು ತಾಯಿ ಮುನಿಲಕ್ಷ್ಮಿ ಹೇಳಿದ್ದಾರೆ.

"ನನಗೆ ಈಗ ಸಿಕ್ಕಿರುವ ಪ್ರವೇಶದ ಬಗ್ಗೆ ಸಂತಸವಿದೆ. ನಮಗೆ ಮಧುರೈ ನಲ್ಲಿ ಯಾರೂ ಪರಿಚಯಸ್ಥರು ಇಲ್ಲದಿರುವುದರಿಂದ ಕಾಲೇಜು ವಿದ್ಯಾರ್ಥಿನಿಲಯದಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡುವೆ" ಎಂದು ರಕ್ಷಣಾ ಹೇಳಿದ್ದಾರೆ.

ಕರ್ತವ್ಯದಲ್ಲಿ ಮೃತರಾದ ಮುನಿಸ್ವಾಮಿ ಅವರ ಕುಟುಂಬಕ್ಕೆ ಜಯಲಲಿತಾ ಸರ್ಕಾರ 1 ಕೋಟಿ ರು ಪರಿಹಾರ ಘೋಷಿಸಿತ್ತು. ರಕ್ಷಣಾ ಅವರ ವಿದ್ಯಾಭ್ಯಾಸದ ಖರ್ಚು ವೆಚ್ಚವನ್ನು ನೋಡಿಕೊಳ್ಳುವುದಾಗಿ ಘೋಷಿಸತ್ತು.

SCROLL FOR NEXT