ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಕುರಿತು ಬೆಂಗಳೂರಿನ ಪ್ರಕಾಶನವೊಂದು ಹೊರತಂದಿರುವ ಇಟ್ಟ ಗುರಿ, ದಿಟ್ಟ ಹೆಜ್ಜೆ ಸಮಾನತೆಯ ಸಾಧಕನ ಸಂಕಲ್ಪ ಹಾದಿ ಎಂಬ ಪುಸ್ತಕವನ್ನು ಕಡ್ಡಾಯವಾಗಿ ಖರೀದಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಹೊರಡಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಸರ್ಕಾರದ ಸುತ್ತೋಲೆ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕರು ನಿರಾಕರಿಸಿದ್ದಾರೆ.
ಮಹಾಪುರುಷರ, ಇತಿಹಾಸ ಪ್ರಸಿದ್ಧ ವ್ಯಕ್ತಿಗಳ, ರಾಜ, ಮಹಾರಾಜರ ಕುರಿತ ಜೀವನ ಚರಿತ್ರೆಯ ಪುಸ್ತಕ ವಿದ್ಯಾರ್ಥಿಗಳು ಓದೋದು ಸಹಜ. ಆದರೆ ಸಿಎಂ ಸಿದ್ದರಾಮಯ್ಯನವರ ರಾಜಕೀಯ ಜೀವನ ಕುರಿತ ಪುಸ್ತಕವನ್ನು ವಿದ್ಯಾರ್ಥಿಗಳು ಓದುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು ಸರಿಯೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.
ಮಾರ್ಚ್ 28ರಂದು ಶಿಕ್ಷಣ ಇಲಾಖೆ ಈ ಬಗ್ಗೆ ಸುತ್ತೋಲೆ ಹೊರಡಿಸಿತ್ತು. ಸಿಎಂ ಅವರ ಇಟ್ಟ ಗುರಿ, ದಿಟ್ಟ ಹೆಜ್ಜೆ ಜೀವನಾಧಾರಿತ ಪುಸ್ತಕ ಖರೀದಿಸುವಂತೆ ಶಿಕ್ಷಣ ಇಲಾಖೆ ಆದೇಶ ನೀಡಿದೆ.
ತುಮಕೂರು ಮಹಾದೇವಯ್ಯ ಪ್ರಧಾನ ಸಂಪಾದಕತ್ವ ಹಾಗೂ ಜಿಜಿ ನಾಗರಾಜು ಅವರ ಸಂಪಾದಕತ್ವದಲ್ಲಿ ಹೊರ ತಂದಿರುವ ಇಟ್ಟ ಗುರಿ ದಿಟ್ಟ ಹೆಜ್ಜೆ ಸಮಾನತೆಯ ಸಂಕಲ್ಪದ ಹಾದಿ ಎಂಬ ಸಿಎಂ ಸಿದ್ದರಾಮಯ್ಯ ಅವರ ಸಾಧನೆ ಸಾರುವ ಪುಸ್ತಕವನ್ನು ರಾಜ್ಯದ ಸರ್ಕಾರಿ ಶಾಲೆಗಳಿಗೆ ಮಾರಾಟ ಮಾಡಲಾಗುತ್ತಿದೆ.
342 ಪುಟಗಳ ಈ ಪುಸ್ತಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಟ್ಟಿನಿಂದ ರಾಜಕೀಯವಾಗಿ ಬೆಳೆದು ಬಂದ ಹಾದಿ, ಆಡಳಿತದ ಚಿತ್ರಣ ಹಾಗೂ ವಿವಿಧ ವಲಯದ ಗಣ್ಯರು ಸಿಎಂ ಬಗ್ಗೆ ಬರೆದಿರುವ ಲೇಖನಗಳ ಸಂಗ್ರಹ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics