ಭಾರತದ ಎನ್ಎಸ್ಜಿ ಸದಸ್ಯತ್ವದ ಬಗ್ಗೆ ಅಮೆರಿಕದಿಂದ ತಪ್ಪು ಹೇಳಿಕೆ: ಚೀನಾ
ಚೀನಾ ವಿರೋಧದಿಂದಾಗಿಯೇ ಭಾರತಕ್ಕೆ ಪರಮಾಣು ಪೂರೈಕೆದಾರರ ಸಮೂಹದ(ಎನ್ಎಸ್ಜಿ) ಸದಸ್ಯತ್ವ ಕೈತಪ್ಪಿತು ಎಂಬ ಅಮೆರಿಕ....
ನವದೆಹಲಿ: ಚೀನಾ ವಿರೋಧದಿಂದಾಗಿಯೇ ಭಾರತಕ್ಕೆ ಪರಮಾಣು ಪೂರೈಕೆದಾರರ ಸಮೂಹದ(ಎನ್ಎಸ್ಜಿ) ಸದಸ್ಯತ್ವ ಕೈತಪ್ಪಿತು ಎಂಬ ಅಮೆರಿಕ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಚೀನಾ, ಅಮೆರಿಕ ವಾಸ್ತಾಂಶಗಳನ್ನು ಬದಿಗೊತ್ತಿ, ತಪ್ಪು ಹೇಳಿಕೆಗಳನ್ನು ನೀಡುತ್ತಿದೆ ಎಂದು ಅಮೆರಿಕ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದೆ.
ಚೀನಾ ನೇತೃತ್ವದ ರಾಷ್ಟ್ರಗಳ ಗುಂಪು ವಿರೋಧ ವ್ಯಕ್ತಪಡಿಸಿದ ಕಾರಣದಿಂದ ಭಾರತಕ್ಕೆ ಎನ್ಎಸ್ಜಿ ಸದಸ್ಯತ್ವ ದೊರೆಯಲಿಲ್ಲ ಎಂದು ಅಮೆರಿಕದ ರಾಜಕೀಯ ವ್ಯವಹಾರಗಳ ಅಧೀನ ಕಾರ್ಯದರ್ಶಿ ಟಾಮ್ ಶನ್ನನ್ ಅವರು ನಿನ್ನೆ ಹೇಳಿದ್ದರು.
ಇಂದು ಅಮೆರಿಕಕ್ಕೆ ತಿರುಗೇಟು ನೀಡಿರುವ ಚೀನಾ, ಚೀನಾದ ವಿದೇಶಾಂಗ ವ್ಯವಹಾರಗಳ ಅಧಿಕಾರಿ ಹಾಂಗ್ ಲೀ, ಅಮೆರಿಕದ ಅಧಿಕಾರಿಗಳು ಸತ್ಯವನ್ನು ಬದಿಗೊತ್ತಿ ಚೀನಾದ ವಿರುದ್ಧ ವೃಥಾ ಆರೋಪ ಹೊರಿಸುತ್ತಿದ್ದಾರೆ. ಎನ್ಎಸ್ಜಿ ಸಭೆಯಲ್ಲಿ ಭಾರತದ ಸದಸ್ಯತ್ವದ ಅಜೆಂಡಾ ಮಾತ್ರ ಇರಲಿಲ್ಲ. ಹಲವಾರು ವಿಷಯಗಳ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಯಾವುದೇ ಒಂದು ರಾಷ್ಟ್ರವನ್ನು ಎನ್ಎಸ್ಜಿಗೆ ಸೇರ್ಪಡೆ ಮಾಡಿಕೊಳ್ಳುವ ಸಂಬಂಧ ಚರ್ಚೆ ನಡೆಸಲಾಗಿಲ್ಲ. ಸಭೆಯಲ್ಲಿ ಸದಸ್ಯತ್ವ ನೀಡುವ ಸಂಬಂಧ ಇರುವ ತಾಂತ್ರಿಕ, ಶಾಸನಾತ್ಮಕ ಮತ್ತು ರಾಜಕೀಯ ವಿಚಾರಗಳ ಕುರಿತು ಮಾತ್ರ ಚರ್ಚೆ ನಡೆಸಲಾಯಿತು ಎಂದು ಅಮೆರಿಕದ ವಿರುದ್ಧ ವಾಗ್ದಾಳಿ ನಡೆಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.