ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದ್ದು ಬಿಜೆಪಿಯೊಂದಿಗೆ ಸರ್ಕಾರ ರಚಿಸಲು ಸಮಸ್ಯೆ ಇಲ್ಲ ಎಂದು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಹೇಳಿಕೆ ನೀಡಿದ್ದಾರೆ. ಬಿಜೆಪಿ ಪರ ಒಲವು ವ್ಯಕ್ತಪಡಿಸಿರುವ ಮೆಹಬೂಬಾ ಮುಫ್ತಿ, ಸರ್ಕಾರ ರಚನೆ ಸಂಬಂಧ ರಾಜ್ಯಪಾಲ ಏನ್ ಏನ್ ವೋಹ್ರಾ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ರಾಜ್ಯದ ಹಿತಾಸಕ್ತಿಗಾಗಿ ಅಲ್ಲದೇ ಅಧಿಕಾರ ಹಿಡಿದರೆ ಅಂಥಹ ಅಧಿಕಾರದಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ನಾನು ಮುಖ್ಯಮಂತ್ರಿಯಾಗುವುದಿದ್ದರೆ ಅದರಿಂದ ರಾಜ್ಯದ ಜನರಿಗೆ ಪ್ರಯೋಜನವಾಗಬೇಕು, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸಿದ್ದಾರೆ. ನನಗೆ ಮುಖ್ಯಮಂತ್ರಿ ಹುದ್ದೆ ಮೇಲೆ ಆಸೆ ಇಲ್ಲ, ನಾನು ಸಿಎಂ ಆಗುವುದಿದ್ದರೆ ರಾಜ್ಯದ ಜನತೆಯ ಹಿತಾಸಕ್ತಿಗಾಗಿ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ.