ಪ್ರಧಾನ ಸುದ್ದಿ

ಕನ್ಹಯ್ಯ ಚಲನವಲನಗಳ ಬಗ್ಗೆ ಮಾಹಿತಿ ನೀಡುತ್ತಿರುವಂತೆ ಜೆ ಎನ್ ಯು ಗೆ ಪೊಲೀಸರ ಸೂಚನೆ

Guruprasad Narayana

ನವದೆಹಲಿ: ಜವಾಹಾರ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರಿಗೆ ಅಗತ್ಯ ಭದ್ರತೆ ನೀಡುವ ಸಲುವಾಗಿ, ಅವರ ಚಲನವಲನಗಳ ಬಗ್ಗೆ ಮಾಹಿತಿ ನೀಡುತ್ತಿರುವಂತೆ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ದೆಹಲಿ ಪೊಲೀಸರು ಸೂಚಿಸಿದ್ದಾರೆ.

ಜೈಲಿನಿಂದ ಕನ್ಹಯ್ಯ ಬಿಡುಗಡೆಯಾದ ನಂತರ ವಿಶ್ವವಿದ್ಯಾಲಕ್ಕೆ ಬರೆಯಲಾಗಿರುವ ಪತ್ರದಲ್ಲಿ, ಕನ್ಹಯ್ಯ ಅವರಿಗೆ ಅಗತ್ಯ ಭದ್ರತೆ ನೀಡಲು ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ವಿಶ್ವವಿದ್ಯಾಲಯದ ಆವರಣದಿಂದ ಅವರು ಹೊರಹೋಗುವ ಮತ್ತು ಅವರ ಪ್ರವಾಸಗಳ ಮಾಹಿತಿಯನ್ನು ಮೊದಲೇ ನೀಡಬೇಕೆಂದು ಡಿಸಿಪಿ ಪ್ರೇಮನಾಥ್ ಸೂಚಿಸಿದ್ದಾರೆ.

ಫೆಬ್ರವರಿ ೧೭ ರಂದು ಪಟಿಯಾಲಾ ಹೌಸ್ ಕೋರ್ಟ್ ಆವರಣದಲ್ಲಿ ಕನ್ಹಯ್ಯ ಮೇಲೆ ಕೆಲವು ವಕೀಲರು ದಾಳಿ ಮಾಡಿದ ಹಿನ್ನಲೆಯಲ್ಲಿ, ದೇಶದ್ರೋಹ ಆರೋಪದಲ್ಲಿ ಬಂಧಿತರಾಗಿರುವ ವಿದ್ಯಾರ್ಥಿಗಳಿಗೆ ಒಂದು ಸಣ್ಣ ಉಗುರುಗಾಯವೂ ಆಗದಂತೆ ನೋಡಿಕೊಳ್ಳುವುದು ಪೊಲೀಸರ ಕರ್ತವ್ಯ ಎಂದು ಕೋರ್ಟ್ ನೀಡಿದ್ದ ಆದೇಶದ ಮೇರೆಗೆ ವಿಶ್ವವಿದ್ಯಾಲಯಕ್ಕೆ ಈ ಪತ್ರ ಬರೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಶ್ವವಿದ್ಯಾಲಯದ ಆವರಣದಿಂದ ಕನ್ಹಯ್ಯ ಹೊರಹೋದಾಗಲೆಲ್ಲ ಪೊಲೀಸರ ತಂಡ ಹಿಂಬಾಲಿಸಲಿದೆ ಎಂದು ಕೂಡ ಪತ್ರದಲ್ಲಿ ಸೂಚಿಸಲಾಗಿದೆ.

ಜಾಮೀನಿನ ಮೇಲೆ ಕನ್ಹಯ್ಯ ಬಿಡುಗಡೆಯಾದ ನಂತರವೂ, ಕನ್ಹಯ್ಯ ಅವರಿಗೆ ಬಿಗಿ ಭದ್ರತೆ ನೀಡಿ ಅವರು ಸುರಕ್ಷಿತವಾಗಿ ವಿಶ್ವವಿದ್ಯಾಲಯ ತಲುಪುವಂತೆ ಪೊಲೀಸರು ನೋಡಿಕೊಂಡಿದ್ದರು.

SCROLL FOR NEXT