ಬೆಂಗಳೂರು: ಟಿವಿಗಳಲ್ಲಿ ಪತ್ರಕರ್ತರು ಜಡ್ಜ್ ಮೆಂಟ್ ಬರೆಯುವುದು ಸರಿಯಲ್ಲ. ಪತ್ರಕರ್ತರು ಅವರ ಕೆಲಸ ಮಾಡಿದರೆ ಎಲ್ಲಾ ಸರಿಯಾಗಿರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಹೇಳಿದ್ದಾರೆ.
ನಗರದಲ್ಲಿ ಆಯೋಜಿಸಲಾಗಿದ್ದ ಟಿವಿ ಜರ್ನಲಿಸ್ಟ್ ಅಸೋಸಿಯೇಷನ್ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿರುವ ಅವರು, ಅಸೋಸಿಯೇಷನ್ ಅಸ್ತಿತ್ವಕ್ಕೆ ಬಂದಿರುವುದು ಸಮಯೋಚಿತ. ಸಾಮಾಜ ಪರಿವರ್ತನೆಗಾಗಿ ಮಾಧ್ಯಮಗಳು ದುಡಿಯಬೇಕು. ಸಮಾಜಿಕ ಜೀವನದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆದರೆ, ಇದು ಸಮಾಜಮುಖಿಯಾಗಿದ್ದರೆ ಒಳ್ಳೆಯದು ಎಂದು ಹೇಳಿದ್ದಾರೆ.
ಇದೇ ವೇಳೆ ಕೆಲ ಮಾಧ್ಯಮಗಳ ವಿರುದ್ಧ ಮುಖ್ಯಮಂತ್ರಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪತ್ರಕರ್ತರಿಗೆ ಪಾಠ ಮಾಡಿದ ಸಿಎಂ, ಟಿವಿಗಳಲ್ಲಿ ಕೆಲ ಪತ್ರಕರ್ತರು ಜಡ್ಜ್ ಮೆಂಟ್ ಬರೆಯುತ್ತಾರೆ. ಟಿವಿಗಳಲ್ಲಿ ಪತ್ರಕರ್ತರು ಜಡ್ಜ್ ಮೆಂಟ್ ಬರೆಯುವುದು ತಪ್ಪು. ಪತ್ರಕರ್ತರು ಅವರವರ ಕೆಲಸ ಮಾಡಿದರೆ, ನ್ಯಾಯಾಧೀಶರು ಅವರ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಪತ್ರಕರ್ತರು ನ್ಯಾಯಾಧೀಶರು ಮಾಡುವ ಕೆಲಸ ಮಾಡಬಾರದು. ಮಾಧ್ಯಮಗಳು ಕೂಡ ಇದನ್ನು ಅರಿತುಕೊಂಡರೆ ಅಷ್ಟೇ ಸಾಕು ಎಂದು ಹೇಳಿದ್ದಾರೆ.
ನಂತರ ಮಾತನಾಡಿರುವ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಅವರು, ಪತ್ರಕರ್ತರು ಬಿಳಿಬಟ್ಟೆಯಂತೆ ಪರಿಶುದ್ಧವಾಗಿರಬೇಕು. ಪ್ರಾಮಾಣಿಕವಾಗಿ ಜನರ ಕಷ್ಟ ಸುಖಗಳಿಗೆ ಸ್ಪಂದಿಸಬೇಕು ಎಂದು ಹೇಳಿದ್ದಾರೆ.
ಸಮಾರಂಭದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವ ಆರ್. ರೋಷನ್ ಬೇಗ್, ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ, ಹಿರಿಯ ಪತ್ರಕರ್ತ ರಾಜದೀಪ್ ಸರ್ ದೇಸಾಯ್ ಉಪಸ್ಥಿತರಿದ್ದರು.