ನವದೆಹಲಿ: ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ 'ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಐದು ಕೋಟಿ ರುಪಾಯಿ ದಂಡ ವಿಧಿಸುವ ಮೂಲಕ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್ ಜಿಟಿ) ಬುಧವಾರ 'ವಿಶ್ವ ಸಾಂಸ್ಕೃತಿಕ ಉತ್ಸವ'ಕ್ಕೆ ಅನುಮತಿ ನೀಡಿದೆ.
ವಿಶ್ವ ಸಾಂಸ್ಕೃತಿಕ ಉತ್ಸವದಿಂದ ಪರಿಸರ ನಾಶವಾಗುತ್ತದೆ ಎಂದು ಆರೋಪಿಸಿ ಪರಿಸರ ವಾದಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಕರಣ, ಕೆಲವು ಷರತ್ತಿನೊಂದಿಗೆ ವಿಶ್ವ ಸಾಂಸ್ಕೃತಿಕ ಉತ್ಸವ ನಡೆಸಲು ಹಸಿರು ನಿಶಾನೆ ತೋರಿದೆ.
ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿಗೆ 1 ಲಕ್ಷ ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಲಕ್ಷ ರುಪಾಯಿ ಹಾಗೂ ಕಾರ್ಯಕ್ರಮ ಆಯೋಜಿಸಿರುವ ಆರ್ಟ್ ಆಫ್ ಲಿವಿಂಗ್ ಗೆ 5 ಕೋಟಿ ರುಪಾಯಿ ದಂಡ ವಿಧಿಸಿದೆ. ಅಲ್ಲದೆ ಕಾರ್ಯಕ್ರಮ ಆರಂಭವಾಗುವ ಮುನ್ನ ದಂಡದ ಮೊತ್ತವನ್ನು ಕಟ್ಟುವಂತೆ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ಅವರು ರವಿಶಂಕರ್ ಗುರೂಜಿ ಅವರಿಗೆ ಸೂಚಿಸಿದ್ದಾರೆ.
ಯಮುನಾ ನದಿಯಲ್ಲಿ ತೇಲುವ ಸೇತುವೆ ನಿರ್ಮಾಣಕ್ಕೆ ಆರ್ಟ್ ಆಫ್ ಲಿವಿಂಗ್‌ಗೆ ಅನುಮತಿ ನೀಡಿದವರು ಯಾರು ಎಂಬ ಪ್ರಶ್ನೆಯನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರ, ದೆಹಲಿ ಸರ್ಕಾರ ಹಾಗೂ ಕೇಂದ್ರ ಅರಣ್ಯ ಸಚಿವಾಲಯಕ್ಕೂ ಕೇಳಿದೆ. ಆದರೆ ಈ ವಿಷಯ ತಮಗೆ ಸಂಬಂಧಿಸಿದ್ದಲ್ಲ ಎಂದು ಎಲ್ಲರೂ ಜಾರಿಕೊಂಡಿದ್ದರು. ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮಕ್ಕೆ ಪಾರ್ಕಿಂಗ್ ಜಾಗ ನಿಗದಿಗೊಳಿಸಿದ್ದು ಯಾರು ಎಂಬ ಪ್ರಶ್ನೆಯನ್ನು ಉತ್ತರಪ್ರದೇಶ ಸರ್ಕಾರದ ಮುಂದೆ ನ್ಯಾಯಾಧಿಕರಣ ಇಟ್ಟಿತ್ತು.
ಮಾ.11ರಿಂದ 13ರ ವರೆಗೆ ನಡೆಯಲಿರುವ ಕಾರ್ಯಕ್ರಮಕ್ಕಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಯಮುನಾ ದಂಡೆಯ ಮೇಲೆ ಬೃಹತ್ ವೇದಿಕೆ ಸಿದ್ಧಪಡಿಸಿದ್ದು, ಟೆಂಟ್ ಮತ್ತು ರಸ್ತೆಗಳನ್ನು ನಿರ್ಮಾಣ ಮಾಡಿದೆ.