ನವದೆಹಲಿ: 'ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಈಗ ಸ್ವಲ್ಪ ನಿರಾಳವಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್ ಜಿಟಿ) ಇಂದಿನಿಂದ ಮೂರು ದಿನಗಳ ಕಾಲ ನಡೆಯುವ 'ವಿಶ್ವ ಸಂಸ್ಕೃತಿ ಉತ್ಸವ'ಕ್ಕೆ ವಿಧಿಸಿದ್ದ 5 ಕೋಟಿ ರುಪಾಯಿ ದಂಡದ ಮೊತ್ತವನ್ನು ಕಟ್ಟಲು 'ಆರ್ಟ್ ಆಫ್ ಲಿವಿಂಗ್‌ನ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರಿಗೆ ಮೂರು ವಾರಗಳ ಕಾಲವಕಾಶ ನೀಡಿದೆ.
ಆರ್ಟ್ ಆಫ್ ಲಿವಿಂಗ್ ಇಂದು 25 ಲಕ್ಷ ರುಪಾಯಿ ದಂಡವನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಟ್ಟಲಿದ್ದು, ಬಾಕಿ 4.75 ಕೋಟಿ ರುಪಾಯಿಯನ್ನು ಮುಂದಿನ ಮೂರು ವಾರಗಳಲ್ಲಿ ಪಾವತಿಸಲಿದೆ.
ವಿಶ್ವ ಸಂಸ್ಕೃತಿ ಉತ್ಸವದಿಂದ ಪರಿಸರ ನಾಶವಾಗುತ್ತದೆ ಎಂದು ಆರೋಪಿಸಿ ಪರಿಸರ ವಾದಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಎನ್ ಜಿಟಿ, 5 ಕೋಟಿ ರುಪಾಯಿ ದಂಡ ಸೇರಿದಂತೆ ಕೆಲವು ಷರತ್ತಿನೊಂದಿಗೆ ವಿಶ್ವ ಸಂಸ್ಕೃತಿ ಉತ್ಸವ ನಡೆಸಲು ಅನುಮತಿ ನೀಡಿತ್ತು. ಅಲ್ಲದೆ ಇಂದು ಸಂಜೆ 5 ಗಂಟೆಯೊಳಗೆ ದಂಡದ ಮೊತ್ತವನ್ನು ಕಟ್ಟುವಂತೆ ಸೂಚಿಸಿತ್ತು. ಆದರೆ ಇಂದು ಸಂಜೆಯೊಳಗೆ 5 ಕೋಟಿ ರುಪಾಯಿ ದಂಡ ಕಟ್ಟಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಾಲವಕಾಶ ನೀಡಿ ಎಂದು ಆರ್ಟ್ ಆಫ್ ಲಿವಿಂಗ್ ನ್ಯಾಯಾಧೀಕರಣಕ್ಕೆ ಮನವಿ ಮಾಡಿತ್ತು.
ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಕರಣ, ಇಂದು 25 ಲಕ್ಷ ರುಪಾಯಿ ಹಾಗೂ ಬಾಕಿ 4.75 ಕೋಟಿ ರುಪಾಯಿಯನ್ನು ಮುಂದಿನ ಮೂರು ವಾರಗಳಲ್ಲಿ ಪಾವತಿಸುವಂತೆ ಸೂಚಿಸಿತು. ಇದಕ್ಕೆ ಆರ್ಟ್ ಆಫ್ ಲಿವಿಂಗ್ ಸಹ ಒಪ್ಪಿಗೆ ಸೂಚಿಸಿದೆ.
ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಇಂದು ಸಂಜೆ 5 ಗಂಟೆಯೊಳಗೆ ದಂಡದ ಮೊತ್ತವನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಟ್ಟುವಲ್ಲಿ ವಿಫಲವಾದರೆ ಸಂಸ್ಕೃತಿ ಉತ್ಸವಕ್ಕೆ ನೀಡಿದ್ದ ಅನುಮತಿಯನ್ನು ಹಿಂಪಡೆಯುವುದಾಗಿ ಎನ್ ಜಿಟಿ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿತ್ತು. ಆದರೆ ಇಂದು ಮತ್ತೆ ಮೂರು ವಾರಗಳ ಕಾಲವಕಾಶ ನೀಡಿದೆ.