ವೇದಿಕೆಯಲ್ಲಿ ಪ್ರಧಾನಿ ಮೋದಿ ಹಾಗೂ ರವಿಶಂಕರ್ ಗುರೂಜಿ
ನವದೆಹಲಿ: ದೇಶ ಮತ್ತು ವಿದೇಶಗಳ ಸಾವಿರಾರು ಕಲಾವಿದರ ಆಕರ್ಷಕ ನೃತ್ಯ ಪ್ರದರ್ಶನದೊಂದಿಗೆ ದೆಹಲಿಯ ಯಮುನಾ ನದಿ ದಂಡೆಯ ಮೇಲೆ 'ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಆಯೋಜಿಸಿರುವ 'ವಿಶ್ವ ಸಂಸ್ಕೃತಿ ಉತ್ಸವ'ಕ್ಕೆ ಶುಕ್ರವಾರ ಸಂಜೆ ಚಾಲನೆ ದೊರೆತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಪ್ರಧಾನಿಗೆ ಅದ್ಧೂರಿ ಸ್ವಾಗತ ನೀಡಿದರು.
ಸುಮಾರು 155 ದೇಶಗಳ ಭಕ್ತರು ವಿಶ್ವ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸುತ್ತಿದ್ದು, ವಿಶ್ವದ ಸುಮಾರು 36 ಸಾವಿರ ಕಲಾವಿದರು ಈ ಮೇಳದಲ್ಲಿ ಪ್ರದರ್ಶನ ನೀಡಲಿದ್ದಾರೆ.
ವಿಶ್ವ ಸಂಸ್ಕೃತಿ ಉತ್ಸವದಿಂದ ಪರಿಸರ ಹಾನಿಯಾಗುತ್ತದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿರೋಧದ ನಡುವೆಯೂ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ 5 ಕೋಟಿ ರುಪಾಯಿ ದಂಡ ಸೇರಿದಂತೆ ಕೆಲವು ಷರತ್ತಿನೊಂದಿಗೆ ವಿಶ್ವ ಸಂಸ್ಕೃತಿ ಉತ್ಸವ ನಡೆಸಲು ಅನುಮತಿ ನೀಡಿದೆ.