ನವದೆಹಲಿ: ಕಳೆದ ವರ್ಷ ನವದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸಾಧಿಸಿದ ಐತಿಹಾಸಿಕ ಗೆಲುವಿನ ನಂತರ ಆಮ್ ಆದ್ಮಿ ಪಕ್ಷ ಈಗ ಮುಂದಿನ ವರ್ಷ ಫೆಬ್ರವರಿಯಲ್ಲಿ ಜರುಗುವ ಸಾಧ್ಯತೆಯಿರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದೆ.
ಮುಂದಿನ ವರ್ಷ ಗೋವಾ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಲು ಎಎಪಿ ಪಕ್ಷದ ಮುಖಂಡರು ಹಸಿರು ನಿಶಾನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಎಎಪಿಯ ರಾಷ್ಟ್ರೀಯ ಸಂಘವನ್ನು ಕಟ್ಟುವ ಹೊಣೆ ಹೊತ್ತಿರುವ ನಾಯಕ ದುರ್ಗೇಶ್ ಪಾಠಕ್ ಇತ್ತೀಚೆಗಷ್ಟೇ ಗೋವಾಕ್ಕೆ ಐದು ದಿನಗಳ ಪ್ರವಾಸ ಕೈಗೊಂಡಿದ್ದರು.
ಮಾರ್ಚ್ ೧೦ ರಂದು ಗೋವಾಗೆ ಭೇಟಿ ನೀಡಿದ್ದ ಎಎಪಿ ನಾಯಕ ಅಶುತೋಶ್ ಮಾಧ್ಯಮಗಳೊಂದಿಗೆ ಮಾತನಾಡಿ "ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಮ್ ಆದ್ಮಿ ಪಕ್ಷ ಗಂಭೀರ ಚರ್ಚೆಯಲ್ಲಿ ತೊಡಗಿದೆ ಎಂದಿದ್ದರು".
ಗೋವಾದಲ್ಲಿ ೪೦ ವಿಧಾನಸಭಾ ಕ್ಷೇತ್ರಗಳಿದ್ದು, ಪ್ರತಿ ಕ್ಷೇತ್ರದ ಸರಾಸರಿ ಮತದಾರರು ಸಾವಿರಗಟ್ಟಲೆ. ಅಲ್ಲದೆ ಗೋವಾದ ೨೫% ಜನರು ಕ್ಯಾಥಲಿಕ್ ಧರ್ಮೀಯರಾಗಿದ್ದು, ಅವರನ್ನು ಕೂಡ ಎಎಪಿ ಗುರಿಯಾಗಿಸಿಕೊಂಡಿದೆ ಎನ್ನಲಾಗಿದೆ.
ಪಕ್ಷ ಕಟ್ಟುವಿಕೆಯ ಯೋಜನೆ ಪೂರ್ಣಗೊಂಡಮೇಲೆ ಮುಂದಿನ ೨ ತಿಂಗಳುಗಳಲ್ಲಿ ಅಧಿಕೃತ ಘೋಷಣೆ ಮಾಡಬಹುದಾದ ಸಾಧ್ಯತೆ ಇದೆ. ಫೆಬ್ರವರಿ ೨೦೧೭ರ ಪಂಜಾಬ್ ವಿಧಾನಸಭಾ ಚುನಾವಣೆಗಳನ್ನು ಸ್ಪರ್ಧಿಸುವುದಾಗಿ ಎಎಪಿ ಈಗಾಗಲೇ ಘೋಷಣೆ ಮಾಡಿದೆ.