ಮತ್ತಷ್ಟು ಅಭಿವೃದ್ಧಿಗೆ ಸಾರ್ವಜನಿಕ ಹೂಡಿಕೆ ಅವಶ್ಯಕ: ಪ್ರಧಾನಿ ಮೋದಿ
ಭಾರತ ವಿಶ್ವದಲ್ಲೇ ಅತಿ ವೇಗವಾಗಿ ಆರ್ಥಿಕತೆಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದು ಪ್ರಧಾನಿ ನರೇಂದ್ರ ಮೋದಿ...
ನವದೆಹಲಿ: ಭಾರತ ವಿಶ್ವದಲ್ಲೇ ಅತಿ ವೇಗವಾಗಿ ಆರ್ಥಿಕತೆಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ಭಾರತದಲ್ಲಿ ಹೂಡಿಕೆ ಹೆಚ್ಚಾದ ಹಿನ್ನಲೆಯಲ್ಲಿ ಅಭಿವೃದ್ಧಿಯಾಗುತ್ತಿದ್ದು, ಇದೇ ರೀತಿ ಜನತೆ ಹೂಡಿಕೆ ಮಾಡಲು ಮುಂದಾದರೆ, ಆರ್ಥಿಕ ಸುಧಾರಣೆಯಾಗುತ್ತದೆ. ಭಾರತದ ಮತ್ತಷ್ಟು ಅಭಿವೃದ್ಧಿಗೆ ಸಾರ್ವಜನಿಕ ಹೂಡಿಕೆ ಅವಶ್ಯಕವಾಗಿದೆ ಎಂದು ಅವರು ತಿಳಿಸಿದ್ದಾರೆ.
'ಅಡ್ವಾನ್ಸಿಂಗ್ ಏಷ್ಯಾ' ಶೃಂಗ ಸಭೆಯಲ್ಲಿ ಮಾತನಾಡಿದ ಅವರು, ಏಷ್ಯಾ ಖಂಡದಲ್ಲಿ ಭಾರತಕ್ಕೆ ವಿಶೇಷವಾದ ಸ್ಥಾನವಿದ್ದು, ಭಾರತದ ಆರ್ಥಿಕಾಭಿವೃದ್ಧಿಯ ವೈಖರಿಯು ಏಷ್ಯಾದಲ್ಲೇ ವಿಶಿಷ್ಟ ಮತ್ತು ವಿಭಿನ್ನವಾಗಿದೆ ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಇದ್ದಂತಹ ಭ್ರಷ್ಟಾಚಾರ ಮತ್ತು ಹಸ್ತಕ್ಷೇಪಗಳು ಈಗಿಲ್ಲ. ನಾವು ತೆಗೆದುಕೊಂಡಂತಹ ಕೆಲ ಪ್ರಮುಖ ನಿರ್ಣಯಗಳಿಂದಾಗಿ ವಾಣಿಜ್ಯೋದ್ಯಮವು ಜನಪ್ರಿಯವಾಗಿದೆ ಎಂದಿದ್ದಾರೆ.
ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಸ್ಥಿರತೆಯನ್ನು ಉಳಿಸಿಕೊಳ್ಳುವಲ್ಲಿ ಭಾರತ ಮುಂದಿದೆ. ರೈತರಿಗೆ ಎರಡು ಪಟ್ಟು ಆದಾಯ ಬರುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಹಾಗಾಗಿ, ಗ್ರಾಮೀಣ ಮತ್ತು ಕೃಷಿಯಲ್ಲಿ ಹೂಡಿಕೆಯನ್ನು ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
2017ರ ಅಂತ್ಯದ ವೇಳೆಗೆ ಭಾರತ ಶೇ.7ರಷ್ಟು ವೇಗದಲ್ಲಿ ಬೆಳೆಯುವ ಅಂದಾಜಿದೆ. ಅಷ್ಟೇ ಅಲ್ಲದೇ, ಆ ವರ್ಷ ಆರ್ಥಿಕ ಬೆಳವಣಿಗೆಯ ವೇಗದಲ್ಲಿ ಭಾರತವೇ ಎಲ್ಲರಿಗಿಂತ ಮುಂದಾಗಿರುತ್ತದೆ ಎಂದು ಐಎಂಎಫ್ ಹೇಳಿತ್ತು. ಈ ಹೇಳಿಕೆಯನ್ನು ಸ್ವಾಗತಿಸಿರುವ ಪ್ರಧಾನಿ ಮೋದಿ, ಪ್ರಜಾಪ್ರಭುತ್ವ ಮತ್ತು ಕ್ಷಿಪ್ರ ಆರ್ಥಿಕ ಬೆಳವಣಿಗೆ ಒಟ್ಟಿಗೆ ಆಗಲು ಸಾಧ್ಯವಿಲ್ಲ ಎಂಬ ಪುರಾಣಗಳನ್ನು ಭಾರತ ತಳ್ಳಿಹಾಕಿದೆ ಎಂದು ಅವರು ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.