ನವದೆಹಲಿ: ದೇಶದಲ್ಲಿ ಆಡಳಿತ ನಡೆಸುವುದಕ್ಕಿಂತಲೂ ಕಾಂಗ್ರೆಸ್ ಪಕ್ಷವನ್ನು ದೂಷಿಸುವುದಕ್ಕಾಗಿಯೇ ಬಿಜೆಪಿ ಹೆಚ್ಚು ಸಮಯ ಕಳೆಯುತ್ತಿದೆ ಎಂದು ಕಾಂಗ್ರೆಸ್ ಲೋಕಸಭಾ ಸದಸ್ಯ ಬಾಲಚಂದ್ರ ಮುಂಗೇಕರ್ ಮಂಗಳವಾರ ಕೇಂದ್ರ ಬಜೆಟ್ ಮೇಲೆ ನಡೆದ ಚರ್ಚೆಯ ವೇಳೆಯಲ್ಲಿ ಟೀಕಾಪ್ರಹಾರ ಮಾಡಿದ್ದಾರೆ.
ಭಾರತದಲ್ಲಿ ಕಾಂಗ್ರೆಸ್ ಆಡಳಿತದ ಸಮಯ ಕಪ್ಪು ಚುಕ್ಕೆ ಎಂದು ಅಪಪ್ರಚಾರ ನಡೆಸಲಾಗುತ್ತಿದ್ದು, ಭಾರತೀಯ ಜನತಾ ಪಕ್ಷದ ಹಿಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೂಡ ಎಂದಿಗೂ ಹೀಗೆ ಹೇಳಿರಲಿಲ್ಲ ಎಂದು ಅವರು ಹೇಳಿದ್ದಾರೆ.
"ಬಿಜೆಪಿ ಸರ್ಕಾರ ಆಡಳಿತ ನಡೆಸುವುದಕ್ಕಿಂತಲೂ ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದಕ್ಕಾಗಿಯೇ ಹೆಚ್ಚಿನ ಸಮಯ ವ್ಯಯಿಸುತ್ತಿದೆ. ಕಾಂಗ್ರೆಸ್ ಪಕ್ಷದ ಮೇಲಿರುವ ದ್ವೇಷ ತ್ಯಜಿಸಿ ಎಂದು ಬಿಜೆಪಿ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ನಾವಿಬ್ಬರೂ ಪರಸ್ಪರ ಗೌರವಯುತ ರಾಜಕೀಯ ವಿರೋಧಿಗಳಾಗಿ ಕಾಣೋಣ" ಎಂದು ಮುಂಗೇಕರ್ ಹೇಳಿದ್ದಾರೆ.
"ಅದೃಷ್ಟವಶಾತ್ ದೇಶದಲ್ಲಿ ಕಾಂಗ್ರೆಸ್ ಎಷ್ಟು ಆಳವಾಗಿ ಬೇರು ಬಿಟ್ಟಿದೆ ಎಂದರೆ.. ಒಂದು ಚುನಾವಣೆಯ ಸೋಲು ಈ ಪಕ್ಷವನ್ನು ಬುಡಮೇಲು ಮಾಡಲು ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ.
ಕೃಷಿ ಆರ್ಥಿಕತೆಯಲ್ಲಿ ವಿಶೇಶ ಪರಿಣಿತಿ ಹೊಂದಿರುವ ಈ ಕಾಂಗ್ರೆಸ್ ಸಂಸದ, ಯೋಜನಾ ಆಯೋಗವನ್ನು ರದ್ದು ಮಾಡಿದ್ದು ತಪ್ಪು ನಿರ್ಧಾರ ಎಂದು ಕೂಡ ಹೇಳಿದ್ದಾರೆ,
"ಅಧಿಕಾರಕ್ಕೆ ಬಂದ ಕೂಡಲೇ, ಯೋಜನಾ ಆಯೋಗವನ್ನು ರದ್ದು ಮಾಡುವ ಮೂಲಕ ಅತಿ ಕೆಟ್ಟ ನಡೆಯನ್ನು ಬಿಜೆಪಿ ಸರ್ಕಾರ ಇಟ್ಟಿತು" ಎಂದು ಕೂಡ ಅವರು ಹೇಳಿದ್ದಾರೆ.
೨೦೧೪ರಲ್ಲಿ ಅಧಿಕಾರಕ್ಕೆ ಬಂದ ನಂತರ ಯೋಜನಾ ಆಯೋಗವನ್ನು ರದ್ದುಪಡಿಸಿ ಅದರ ಬದಲಾಗಿ ನೀತಿ ಆಯೋಗವನ್ನು ಎನ್ ಡಿ ಎ ಸರ್ಕಾರ ರಚಿಸಿತ್ತು.