ನವದೆಹಲಿ: ಮಹಾಶಿವರಾತ್ರಿ ವೇಳೆ ಸೋಮನಾಥ ದೇವಾಲಯ ಸೇರಿದಂತೆ ಪ್ರಮುಖ ದೇವಾಲಯಗಳ ಮೇಲೆ ದಾಳಿ ಮಾಡುವ ಉದ್ದೇಶದಿಂದ ಗುಜರಾತ್ ಮೂಲಕ ಭಾರತ ಪ್ರವೇಶಿಸಿದ್ದ ಪಾಕಿಸ್ತಾನದ 10 ಶಂಕಿತ ಉಗ್ರರ ಪೈಕಿ ಮೂವರನ್ನು ಮಂಗಳವಾರ ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ್ದಾರೆ.
ಉಗ್ರರ ದಾಳಿಯ ಯತ್ನವನ್ನು ವಿಫಲಗೊಳಿಸಿರುವ ರಕ್ಷಣಾ ಪಡೆಗಳು, ಗುಜರಾತ್ ಪ್ರವೇಶಿಸಿದ್ದ ಲಷ್ಕರ್ ಇ ತೋಯಿಬಾ ಹಾಗೂ ಜೈಶ್ ಇ ಮೊಹಮ್ಮದ್ ಸಂಘಟನೆಯ 10 ಶಂಕಿತ ಉಗ್ರರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈಗಗಾಲೇ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಉಳಿದ ಉಗ್ರರಿಗಾಗಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಸಿಎನ್ಎನ್ಐಬಿಎನ್ ವರದಿ ಮಾಡಿದೆ.
ಸೋಮನಾಥ ದೇವಾಲಯ, ದ್ವಾರಕ, ಅಕ್ಷರಧಾಮ ಹಾಗೂ ಇತರೆ ಪ್ರಮುಖ ಸ್ಥಳಗಳಲ್ಲಿ ಉಗ್ರ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ದೇಶಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿತ್ತು.
ಗುಪ್ತಚರ ಇಲಾಖೆ ಪಾಕಿಸ್ತಾನದ 10 ಉಗ್ರರು ಬೋಟ್ ಮೂಲಕ ಗುಜರಾತ್ ಪ್ರವೇಶಿಸಿದ್ದಾರೆ ಎಂಬ ಮಾಹಿತಿ ರವಾನಿಸಿದ್ದರು. ಇದಕ್ಕೆ ಪೂರಕವೆಂಬಂತೆ ಶಿವರಾತ್ರಿಯ ಮುನ್ನಾ ದಿನ ಗುಜರಾತ್ ಕಚ್ ನಲ್ಲಿ ಪಾಕಿಸ್ತಾನದ ಬೋಟ್ ಸಹ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಗುಜರಾತ್ ಹಾಗೂ ದೆಹಲಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು.