ರಜನಿ - ಪತಿ ಚುಟ್‌ಕೆ ಹಾಗೂ ಮಕ್ಕಳು
ಹೈದರಾಬಾದ್: ತಂದೆಯೇ ತನ್ನ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಹತ್ಯೆ ಮಾಡಿದ ಆರೋಪದ ಮೇಲೆ ರಜನಿ ಎಂಬ 41 ವರ್ಷದ ಮಹಿಳೆಯನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಆಕೆಯ ಪತಿ 45 ವರ್ಷದ ಚುಟ್‌ಕೆ ವಿನಯ್ ಅವರನ್ನು ಸಹ ಗುರುವಾರ ವಶಕ್ಕೆ ಪಡೆದಿದ್ದಾರೆ.
ಎಂಬಿಎ ಪದವೀಧರೆಯಾಗಿರುವ ರಜನಿ ಬುಧವಾರ ರಾತ್ರಿ ತನ್ನ 7 ವರ್ಷದ ಅಶ್ವಿಕಾ ಹಾಗೂ ಮೂರು ವರ್ಷದ ತವಿಸ್ಕಾಗಳನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಸಿಕಂದರಬಾದ್ ನ ತುಕಾರಾಮಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಜನಿ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ತುಂಡಾದ "ಜಾಮ್ ಜಾರ್' ಬಳಸಿ ಕತ್ತು ಸೀಳಿ ಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಆಘಾತಕಾರಿ ಕೃತ್ಯದ ಬಳಿಕ ರಕ್ತಸಿಕ್ತ ಕೈಗಳನ್ನು ತೊಳೆಯಲು ಮತ್ತು ಸ್ವತಃ ಆತ್ಮಹತ್ಯೆ ಮಾಡಿಕೊಳ್ಳಲು ನಗರದ ಹುಸೇನ್ ಸಾಗರ್ ಸರೋವರಕ್ಕೆ ತೆರಳಿದ್ದ ರಜನಿ, ಹೆದರಿಕೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಾಗದೇ ಮನೆಗೆ ಮರಳಿದ್ದಾಳೆ.
ಮಕ್ಕಳನ್ನು ಕೊಂದದ್ದಕ್ಕೆ ನನಗೆ ಖೇದವಿದೆ. ಆದರೆ ನಾನವರನ್ನು ಅವರ ತಂದೆಯ ಲೈಂಗಿಕ ಶೋಷಣೆಯಿಂದ ಶಾಶ್ವತವಾಗಿ ಮುಕ್ತಗೊಳಿಸಿದ್ದೇನೆ ಎಂದು ರಜನಿ ಪೊಲೀಸರಲ್ಲಿ ತಿಳಿಸಿದ್ದಾಳೆ.
ರಜನಿ ಮಕ್ಕಳನ್ನು ಹತ್ಯೆ ಮಾಡಿದ ಸುಮಾರು 45 ನಿಮಿಷಗಳ ಬಳಿಕ ಆಕೆಯ ಪತಿ ಚುಟ್‌ಕೆ ವಿನಯ್ ತನ್ನ "ಗಿಫ್ಟ್ ಶಾಪ್'ನಿಂದ ಮನೆಗೆ ಮರಳಿದ್ದಾನೆ. ಮನೆಯ ಬಾಗಿಲು ಸ್ವಲ್ಪ ತೆರೆದುಕೊಂಡಿದ್ದುದನ್ನು ನೋಡಿ ಮನೆಯನ್ನು ಪ್ರವೇಶಿಸಿದ ಆತನಿಗೆ ಪತ್ನಿ ಇಲ್ಲದಿರುವುದನ್ನು ಹಾಗೂ ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದುಕೊಂಡಿದ್ದ ಪುತ್ರಿಯರನ್ನು ಕಂಡು ಆಘಾತವಾಗಿದೆ. ಓರ್ವ ಪುತ್ರಿಯ ಶವ ಹಾಸಿಗೆಯ ಮೇಲೂ ಇನ್ನೊಬ್ಬ ಪುತ್ರಿಯ ಶವ ಸ್ನಾನದ ಕೋಣೆಯಲ್ಲೂ ಬಿದ್ದುಕೊಂಡಿತ್ತು.
"ನಾನು ನನ್ನ ಇಬ್ಬರೂ ಹೆಣ್ಣು ಮಕ್ಕಳನ್ನು ಕೊಂದಿರುವ ವಿಷಯವನ್ನು ನನ್ನ ಸ್ನೇಹಿತರಿಗೆ ಮೆಸೇಜ್ ಮಾಡಿ ತಿಳಿಸಿದ್ದೇನೆ. ಆ ಮಕ್ಕಳನ್ನು ತಮ್ಮ ತಂದೆಯ ಲೈಂಗಿಕ ಕಿರುಕುಳದಿಂದ ನಾನು ಶಾಶ್ವತವಾಗಿ ಮುಕ್ತಗೊಳಿಸಿದ್ದೇನೆ' ಎಂದು ರಜಿನಿ ಹೇಳಿದ್ದಾಳೆ.
ಪತಿ ಚುಟ್‌ಕೆ ಮಕ್ಕಳಿಗೆ ಲೈಂಗಿಕ ಕಿರುಕುಳ ಕೊಡುತ್ತಿರುವ ಬಗ್ಗೆ ಕಳೆದ ಆರು ತಿಂಗಳಿಂದಲೂ ತನಗೆ ಶಂಕೆ ಇತ್ತು ಎಂದಿರುವ ರಜನಿ, ತನ್ನ ಹಿರಿಯ ಪುತ್ರಿ ಆಶ್ವಿಕಾ ತಂದೆಯನ್ನು ಕಾಣುತ್ತಲೇ ಭಯದಿಂದ ನಡುಗುತ್ತಿದ್ದಳು ಎಂದು ಹೇಳಿದ್ದಾಳೆ. ತನ್ನ ತಂದೆ ತನ್ನ ಗುಪ್ತಾಂಗವನ್ನು ಮುಟ್ಟುತ್ತಿರುವ ಬಗ್ಗೆ ಆಕೆ ಯಾರಲ್ಲೋ ಹೇಳಿಕೊಂಡಿದ್ದಳು ಎಂಬುದಾಗಿ ರಜಿನಿ ಪೊಲೀಸರಲ್ಲಿ ಹೇಳಿರುವುದಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿ ಪ್ರಕಾಶ್ ರೆಡ್ಡಿ ತಿಳಿಸಿದ್ದಾರೆ. ಕಳೆದ ವಾರ ರಜನಿ ಮತ್ತು ಆಕೆಯ ಗಂಡ ವಿನಯ್ ಜೋರಾಗಿ ಜಗಳವಾಡಿಕೊಂಡಿದ್ದರು ಎಂದವರು ಹೇಳಿದ್ದಾರೆ.
ಈ ಮಧ್ಯೆ ಚುಟ್‌ಕೆ ತನ್ನ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.