ಪ್ರಧಾನ ಸುದ್ದಿ

ವೆಮುಲಾ ವಿವಾದದ ನಂತರ ಮತ್ತೆ ಅಧಿಕಾರ ಸ್ವೀಕರಿಸಿದ ಉಪಕುಲಪತಿ ಅಪ್ಪಾ ರಾವ್

Guruprasad Narayana

ಹೈದರಾಬಾದ್: ಹೈದರಾಬಾದ್ ವಿಶ್ವವಿದ್ಯಾಲಯದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ಆತ್ಮಹತ್ಯೆಯ ನಂತರ ಟೀಕೆಗಳ ಮಹೂಪೂರ ಹರಿದುಬಂದು, ರಜೆಯ ಮೇಲೆ ತೆರಳಿದ್ದ ಉಪಕುಲಪತಿ ಪಿ ಅಪ್ಪಾ ರಾವ್, ಮಂಗಳವಾರ ಮತ್ತೆ ಸ್ಥಾನಕ್ಕೆ ಹಿಂದಿರುಗಿದ್ದಾರೆ.

ಹಂಗಾಮಿ ಉಪಕುಲಪತಿ ಡಾ. ವಿಪಿನ್ ಶ್ರೀವಾಸ್ತವ ಕೂಡ ರಜೆಯ ಮೇಲೆ ತೆರಳಿದ್ದರಿಂದ ಎಂ ಪೆರಿಸ್ವಾಮಿ, ರಾವ್ ಅವರ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದರು.

ದಲಿತ ವಿದ್ಯಾರ್ಥಿಗಳನ್ನು ಉಚ್ಛಾಟನೆ ಮಾಡಿದ್ದಕ್ಕೆ ರಾವ್ ವಿರುದ್ಧ ಟೀಕೆಗಳು ಕೇಳಿಬಂದಿದ್ದವು. ಆ ವಿದ್ಯಾರ್ಥಿಯಲ್ಲಿ ಒಬ್ಬರಾದ ರೋಹಿತ್ ಜನವರಿ ೧೭ ರಂದು ಆತ್ಮಹತ್ಯೆ ಮಾಡಿಕೊಂಡ ನಂತರವಂತೂ ರಾವ್ ವಿರುದ್ಧ ವಿದ್ಯಾರ್ಥಿಗಳು ಹರಿಹಾಯ್ದಿದ್ದರು ಮತ್ತು ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.

ಉಪಕುಲಪತಿ ಸುದ್ದಿಗೋಷ್ಠಿಗೂ ಮುಂಚಿತವಾಗಿ ಪ್ರತಿಭಟನಾ ವಿದ್ಯಾರ್ಥಿಗಳ ದಾಳಿ
ಮತ್ತೆ ಉಪಕುಲಪತಿ ಸ್ಥಾನ ಅಲಂಕರಿಸಿದ ಮೇಲೆ ಅಪ್ಪ ರಾವ್ ಮಂಗಳವಾರ ಸುದ್ದಿಗೋಷ್ಠಿ ನಡೆಸುವುದಾಗಿ ಹೇಳಿದ್ದರು. ಆದರೆ ಈ ನಡೆಯನ್ನು ವಿರೋಧಿಸುತ್ತಿರುವ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಸ್ಥಳಕ್ಕೆ ಮೊದಲೇ ತೆರಳಿ ದಾಳಿ ನಡೆಸಿದರು ಎನ್ನಲಾಗಿದೆ. ಅಲ್ಲಿ ಗಾಜಿನ ಕಿಟಕಿ, ಟಿವಿಗಳು ಮತ್ತಿತರ ವಸ್ತುಗಳನ್ನು ಹಾನಿ ಮಾಡಲಾಗಿದೆ ಮತ್ತು ಅಪ್ಪಾರಾವ್ ವಿರುದ್ಧ ಘೋಷಣೆಗಳನ್ನು ಕೂಗಲಾಗಿದೆ ಎಂದು ತಿಳಿದುಬಂದಿದೆ.

SCROLL FOR NEXT