ಪ್ರಧಾನ ಸುದ್ದಿ

ಹೈದರಾಬಾದ್ ವಿವಿ ಉದ್ವಿಗ್ನ; ತರಗತಿಗಳು ರದ್ದು; ಹೊರಗಿನವರಿಗೆ ಪ್ರವೇಶ ನಿಷಿದ್ದ

Guruprasad Narayana

ಹೈದರಾಬಾದ್: ಹೈದರಾಬಾದ್ ವಿಶ್ವವಿದ್ಯಾಲಯದ ಉಪಕುಲಪತಿ ಅಪ್ಪ ರಾವ್, ರಜೆಯಿಂದ ಹಿಂದಿರುಗಿ ತಮ್ಮ ಸ್ಥಾನವನ್ನು ಮತ್ತೆ ಅಲಂಕರಿಸಿರುವುದರಿಂದ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರವಾಗಿದ್ದು, ಉದ್ವಿಗ್ನ ವಾತಾವರಣ ಉಂಟಾಗಿದೆ ಎಂದು ತಿಳಿದುಬಂದಿದೆ. ನಾಲ್ಕು ದಿನಗಳವರೆಗೆ ತರಗತಿಗಳನ್ನು ರದ್ದುಪಡಿಸಿದ್ದು, ಹೊರಗಿನಿಂದ ಬೇರ್ಯಾರೂ ವಿಶ್ವವಿದ್ಯಾಲಯದ ಆವರಣ ಪ್ರವೇಶಿಸದಂತೆ ಅಧಿಕಾರಿಗಳು ತಡೆ ಹಾಕಿದ್ದಾರೆ.

ಮುಖ್ಯ ದ್ವಾರ ಮತ್ತು ಇತರ ಸಣ್ಣ ದ್ವಾರಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿದ್ದು, ಮಾಧ್ಯಮದವರನ್ನು ಕೂಡ ವಿಶ್ವವಿದ್ಯಾಲಯ ಆವರಣ ಪ್ರವೇಶಿಸದಂತೆ ತಡೆಯಲಾಗಿದೆ. ನೆನ್ನೆ ಉಪಕುಲಪತಿಯವರ ಪತ್ರಿಕಾ ಗೋಷ್ಠಿಗೂ ಮುಂಚಿತವಾಗಿ ಕೆಲವು ವಿದ್ಯಾರ್ಥಿಗಳು ಅವರ ನಿವಾಸದಲ್ಲಿ ನಡೆಸಿದ ದಾಂಧಲೆಯಿಂದ ಸೋಮವಾರದವರೆಗೆ ತರಗತಿಗಳನ್ನು ರದ್ದುಮಾಡಲಾಗಿದೆ. "ಪರಿಸ್ಥಿಯನ್ನು ನಿಭಾಯಿಸಲು ಮಾರ್ಚ್ ೨೩ ರಿಂದ ೨೬ರವರೆಗೆ ತರಗತಿಗಳನ್ನು ರದ್ದುಪಡಿಸಲಾಗಿದೆ. ವಿಶ್ವವಿದ್ಯಾಲಯದ ಅವಾರಣದೊಳಗೆ ಯಾವುದೇ ರಾಜಕೀಯ ಪಕ್ಷವಾಗಲಿ, ಮಾಧ್ಯಮಗಳಾಗಲಿ, ಇನ್ಯಾರೇ ಹೊರಗಿನವರಾಗಲೀ ಒಳಗೆ ಬರದಂತೆ ತಡೆಯಲೂ ನಿರ್ಧಾರ ತೆಗೆದುಕೊಂಡಿದ್ದೇವೆ" ಎಂದು ವಿಶ್ವವಿದ್ಯಾಲಯಕ್ಕೆ ಜೆ ಎನ್ ಯು ವಿದ್ಯಾರ್ಥಿ ಸಂಘಟನೆಯ ಮುಖಂಡ ಕನ್ಹಯ್ಯ ಕುಮಾರ್ ಬರಲಿದ್ದಾರೆ ಎಂಬ ಸುದ್ದಿಯ ನಡುವೆ ರಿಜಿಸ್ಟಾರ್ ಎಂ ಸುಧಾಕರ್ ಹೇಳಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಪಡೆಗಳನ್ನು ವಿಶ್ವವಿದ್ಯಾಲಯದ ಸುತ್ತಮುತ್ತ ನೇಮಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. "ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಪಡೆಗಳನ್ನು ನೇಮಿಸಲಾಗಿದೆ" ಎಂದು ಸೈದರಾಬಾದ್ ಜಂಟಿ ಪೊಲೀಸ್ ಮಹಾನಿರ್ದೇಶಕ ಶಶಿಧರ್ ರೆಡ್ಡಿ ಹೇಳಿದ್ದಾರೆ.

ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಬಂದಿದ್ದ ಕಾಂಗ್ರೆಸ್ ಮುಖಂಡ ವಿ ಹನುಮಂತ ರಾವ್ ಅವರನ್ನು ಪ್ರವೇಶ ದ್ವಾರದಲ್ಲಿಯೇ ತಡೆಯಲಾಗಿದೆ. ಉಪಕುಲಪತಿಗಳ ನಿವಾಸದ ಎದುರು ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.

ನೆನ್ನೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಉಪಕುಲಪತಿಗಳ ಮನೆಯ ಮೇಲೆ ದಾಳಿ ಮಾಡಿ ಕಿಟಕಿ ಗಾಜುಗಳು, ಟಿವಿ ಮತ್ತಿತರ ವಸ್ತುಗಳನ್ನು ಧ್ವಂಸ ಮಾಡಿದ್ದರು.

ಜನವರಿ ೧೭ ರಂದು ವಿದ್ಯಾರ್ಥಿನಿಲಯದಿಂದ ಉಚ್ಛಾಟಿತಗೊಂಡಿದ್ದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡ ಹಿನ್ನಲೆಯಲ್ಲಿ ಉಪಕುಲಪತಿ ಅಪ್ಪ ರಾವ್ ಅವರನ್ನು ಕೂಡಲೇ ಬಂಧಿಸಬೇಕೆಂದು ವಿದ್ಯಾರ್ಥಿಗಳು ಪಟ್ಟುಹಿಡಿದಿದ್ದರು. ಆದರೆ ರಜೆಯ ಮೇಲೆ ತೆರಳಿದ್ದ ಅಪ್ಪ ರಾವ್ ನೆನ್ನೆ ಮತ್ತೆ ಅಧಿಕಾರ ಹಿಂದಕ್ಕೆ ಪಡೆದಿದ್ದಾರೆ. 

SCROLL FOR NEXT