ವಿಜಯ್ ಮಲ್ಯರ ಐಷಾರಾಮಿ ವಿಮಾನ
ನವದೆಹಲಿ: ಇತ್ತೀಚಿಗಷ್ಟೇ ಮುಂಬೈಯಲ್ಲಿರುವ ಉದ್ಯಮಿ, ಮದ್ಯದ ದೊರೆ ವಿಜಯ್ ಮಲ್ಯ ಅವರ 'ಕಿಂಗ್‌ಫಿಶರ್ ಹೌಸ್' ಹರಾಜು ಹಾಕಲಾಗಿತ್ತು, ಆದರೆ ಅದನ್ನು ಖರೀದಿಸಲು ಯಾರೂ ಮುಂದೆ ಬರದ ಹಿನ್ನೆಲೆಯಲ್ಲಿ 9 ಸಾವಿರ ಕೋಟಿ ರುಪಾಯಿ ಸಾಲ ವಸೂಲಿ ಮಾಡುವ 17 ಬ್ಯಾಂಕ್‌ಗಳ ಪ್ರಯತ್ನಕ್ಕೆ ಭಾರೀ ಹಿನ್ನಡೆಯಾಗಿತ್ತು. ಇದೀಗ ಸೇವಾ ತೆರಿಗೆ ಬಾಕಿ ಉಳಿಸಿಕೊಂಡಿರುವ ವಿಜಯ್ ಮಲ್ಯ ಅವರ ಐಷಾರಾಮಿ ವಿಮಾನ ಹರಾಜು ಹಾಕಲು ಸೇವಾ ತೆರಿಗೆ ಇಲಾಖೆ ಮುಂದಾಗಿದೆ.
ಏಪ್ರಿಲ್ 2011ರಿಂದ ಮಾರ್ಚ್ 2012ರವರೆಗೆ ಮತ್ತು ಏಪ್ರಿಲ್ 2012ರಿಂದ ಸೆಪ್ಟೆಂಬರ್ 2012ರವರೆಗೆ ಒಟ್ಟು 532 ಕೋಟಿ ರುಪಾಯಿ ತೆರಿಗೆಯನ್ನು ವಿಜಯ ಮಲ್ಯ ಬಾಕಿ ಉಳಿಸಿಕೊಂಡಿದ್ದು, ಅದನ್ನು ವಸೂಲಿ ಮಾಡುವುದಕ್ಕಾಗಿ ಮೇ 12ರಂದು ಐಷಾರಾಮಿ ವಿಮಾನ ಹರಾಜಿಗೆ ತೀರ್ಮಾನಿಸಲಾಗಿದೆ.
ಮದ್ಯದ ದೊರೆಯ ವಿಮಾನ ಒಂದು ಪ್ರತ್ಯೇಕ ಕಾನ್ಫರೆನ್ಸ್ ಹಾಲ್ ಹಾಗೂ ಉಳಿಯಲು ಬೆಡ್ ರೂಮ್ ಸೇರಿದಂತೆ ಹಲವು ಐಷಾರಾಮಿ ಸೌಲಭ್ಯವನ್ನು ಹೊಂದಿದೆ. ಬರೋಬ್ಬರಿ 266 ಕೋಟಿ ರುಪಾಯಿ ಮೌಲ್ಯದ ಮಲ್ಯ ವಿಮಾನವನ್ನು ಈಗ ಹರಾಜು ಹಾಕಲಾಗುತ್ತಿದೆ.