ಮುಂಬೈ: ಉಗ್ರ ಸಂಘಟನೆಯಾದ ಲಷ್ಕರೆ ತೊಯ್ಬಾ ದ ಹಿಟ್ ಲಿಸ್ಟ್‌ನಲ್ಲಿ ಭಾಳ್ ಠಾಕ್ರೆಯವರ ಹೆಸರು ಇತ್ತು ಎಂಬುದರ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಶಿವಸೇನಾ ನಾಯಕ ಸಂಜಯ್ ರೌತ್ ಗುರುವಾರ ಹೇಳಿದ್ದಾರೆ.
ಅಪ್ಪಟ ದೇಶಪ್ರೇಮಿಯಾಗಿರುವ ಠಾಕ್ರೆಯವರು ಪಾಕಿಸ್ತಾನದ ಉಗ್ರ ಕೃತ್ಯಗಳನ್ನು ಖಂಡಿಸುತ್ತಲೇ ಇದ್ದರು. ಹಾಗಿರುವ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲು ಉಗ್ರರು ಯೋಜನೆ ಹೂಡಿದ್ದರಲ್ಲಿ ಅಚ್ಚರಿಯೇನಿಲ್ಲ ಎಂದು ರೌತ್ ಅಭಿಪ್ರಾಯ ಪಟ್ಟಿದ್ದಾರೆ.
ಶಿವಸೇನೆಯ ಮುಖ್ಯಸ್ಥ ಭಾಳ್ ಠಾಕ್ರೆಯನ್ನು ಹತ್ಯೆ ಮಾಡಲು ಲಷ್ಕರೆ ಬಾಡಿಗೆ ಗೂಂಡಾಗಳನ್ನು ನಿಯೋಜಿಸಿತ್ತು. ಆದರೆ ಆ ಯೋಜನೆ ಕೈ ಜಾರಿತ್ತು. ಇದಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಒಬ್ಬನನ್ನು ವಶ ಪಡಿಸಿದ್ದು, ಆತ ಅಲ್ಲಿಂದ ತಪ್ಪಿಸಿಕೊಂಡಿದ್ದ. ಈ ವಿಷಯವನ್ನು ಪೊಲೀಸ್ ಬಚ್ಚಿಟ್ಟದ್ದು ಯಾಕೆ?. ಆತ ಪೊಲೀಸ್ ಬಂಧನದಿಂದ ತಪ್ಪಿಸಿಕೊಂಡಿದ್ದು ಹೇಗೆ? ಇದರ ಹಿಂದೆ ಪೊಲೀಸ್ ಗೂಢಾಲೋಚನೆಗಳಿವೆ? ಇದಕ್ಕೆಲ್ಲಾ ಪೊಲೀಸರು ಮತ್ತು ಸರ್ಕಾರ ಉತ್ತರಿಸಬೇಕಾಗಿದೆ ಎಂದು ರೌತ್ ಒತ್ತಾಯಿಸಿದ್ದಾರೆ.
ಬಾಳ್ ಠಾಕ್ರೆಯನ್ನು ಹತ್ಯೆಗೈಯ್ಯಲು ಪಾಕ್ ಉಗ್ರ ಸಂಘಟನೆ ಲಷ್ಕರೆ ಸಂಚು ಹೂಡಿತ್ತು ಎಂದು ಡೇವಿಡ್ ಹೆಡ್ಲಿ ಹೇಳಿದ್ದರ ಹಿನ್ನಲೆಯಲ್ಲಿ ರೌತ್ ಈ ಹೇಳಿಕೆ ನೀಡಿದ್ದಾರೆ.