ಸಿದ್ದರಾಮಯ್ಯ - ಮಲ್ಲಿಕಾರ್ಜನ್ ಖರ್ಗೆ
ಬೆಂಗಳೂರು: ವಿವಾದಿತ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರಚನೆಗೆ ಸಂಬಂಧಿಸಿದಂತೆ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿದ್ದು, ಎಸಿಬಿ ರಚನೆಯ ಬಗ್ಗೆ ಶಾಸಕರಿಗೆ ಅಸಮಾಧಾನವಿದ್ದರೆ ಅದನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಸುಮಾರು 15 ರಾಜ್ಯಗಳಲ್ಲಿ ಎಸಿಬಿ ರಚನೆಯಾಗಿದೆ. ಹಾಗಾಗಿ ಈ ಬಗ್ಗೆ ಹೆಚ್ಚು ಗೊಂದಲ ಸೃಷ್ಟಿಸೋದು ಬೇಡ ಎಂದರು.
ರಾಜ್ಯದಲ್ಲಿ ಎಸಿಬಿ ರಚಿಸುವ ಸಿಎಂ ನಿರ್ಧಾರ ಸರಿಯಾಗಿದೆ. ಎಸಿಬಿಯಿಂದ ಲೋಕಾಯುಕ್ತದ ಅಧಿಕಾರ ಮೊಟಕಾಗುವುದಿಲ್ಲ. ಲೋಕಾಯುಕ್ತದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲವೆಂದು ಸಿಎಂ ಹೇಳಿದ್ದಾರೆ. ಅವರ ಮಾತನ್ನು ನಾವು ನಂಬಬೇಕು. ಹಾಗಾಗಿ ಎಸಿಬಿ ರಚನೆಯನ್ನು ವಿರೋಧ ಮಾಡುವುದು ಸರಿಯಲ್ಲ ಎಂದರು.
ಇದೇ ವೇಳೆ ರಾಜ್ಯದಲ್ಲಿ ಎಸಿಬಿ ರಚನೆ ಕುರಿತು ಹೈಕಮಾಂಡ್ ಯಾವುದೇ ವರದಿ ನೀಡುವಂತೆ ತಮ್ಮನ್ನು ಕೇಳಿಲ್ಲ ಮತ್ತು ರಾಷ್ಟ್ರಮಟ್ಟದಲ್ಲಿ ಈ ಬಗ್ಗೆ ಯಾವುದೇ ಚರ್ಚೆಯೂ ನಡೆದಿಲ್ಲ ಎಂದು ಖರ್ಗೆ ಸ್ಪಷ್ಟಪಡಿಸಿದರು.
ಉಭಯ ನಾಯಕರು ರಾಜ್ಯ ರಾಜಕಾರಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಉಭಯ ನಾಯಕರು ಸಮಾಲೋಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics