ಬೆಂಗಳೂರು: ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯ ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ರಚಿಸಲಾಗಿದೆ ಮತ್ತು 30 ಜಿಲ್ಲೆಗಳಲ್ಲೂ ಪೊಲೀಸ್ ಠಾಣೆ ಆರಂಭಿಸುತ್ತಿರುವುದರಿಂದ ಲೋಕಾಯುಕ್ತ ಪೊಲೀಸರ ಅಧಿಕಾರವನ್ನು ಹಿಂಪಡೆಯಲಾಗಿದೆ ಎಂದು ಗುರುವಾರ ರಾಜ್ಯ ಸರ್ಕಾರ ಹೈಕೋರ್ಟ್ ಗೆ ತಿಳಿಸಿದೆ.
ಲೋಕಾಯುಕ್ತ ಪೊಲೀಸ್ ಅಧಿಕಾರ ಮೊಟಕು ವಿಚಾರಕ್ಕೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆ ವೇಳೆ, ಮಾರ್ಚ್ 14ರಂದು ಲೋಕಾಯುಕ್ತರ ಪೊಲೀಸರ ಅಧಿಕಾರವನ್ನು ಹಿಂಪಡೆಯಲಾಗಿದೆ ಮತ್ತು ಮಾರ್ಚ್ 30ರಂದು ಎಸಿಬಿ ಪೊಲೀಸ್ ಠಾಣೆಗಳ ರಚನೆಗೆ ಆದೇಶ ನೀಡಲಾಗಿದೆ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಅವರು ಕೋರ್ಟ್ ಮಾಹಿತಿ ನೀಡಿದರು. ಆದರೆ ಸರ್ಕಾರ ಮಾಹಿತಿಯಿಂದ ಸಮಾಧಾನಗೊಳ್ಳದ ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲಗೌಡ ಅವರು, ಮಾ.14ರಿಂದ ಮಾ.30ರವರೆಗೂ ಭ್ರಷ್ಟಾಚಾರ ನಡೆದಿಲ್ಲವೇ? ಈ ದಿನಗಳಲ್ಲಿ ನಡೆದ ಭ್ರಷ್ಟಾಚಾರಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದರು.
ಸುಮಾರು 700 ಲೋಕಾಯುಕ್ತ ಪೊಲೀಸರಿಗೆ ಈಗ ಕೆಲಸವಿಲ್ಲದಂತಾಗಿದೆ. ಭ್ರಷ್ಟಾಚಾರ ವಿರುದ್ಧದ ಕಾರ್ಯಾಚರಣೆಯೇ ಸ್ಥಗಿತವಾಗಿದೆ ಎಂದು ನ್ಯಾಯಮೂರ್ತಿ ವೇಣುಗೋಪಾಲಗೌಡ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಲೋಕಾಯುಕ್ತ ಸಂಸ್ಥೆ ಹಾಗೂ ಲೋಕಾಯುಕ್ತ ಪೊಲೀಸ್ ಘಟಕ ಕರ್ತವ್ಯ ನಿರ್ವಹಣೆ ವಿಚಾರದಲ್ಲಿದ್ದ ಗೊಂದಲಗಳನ್ನು ನಿವಾರಿಸುವ ಉದ್ದೇಶದಿಂದ ಹೈಕೋರ್ಟ್ ಆದೇಶ ಹಾಗೂ ಹಿರಿಯ ಅಧಿಕಾರಿಗಳ ಜತೆ ರ್ಚಚಿಸಿ ಎಸಿಬಿ ರಚಿಸಲಾಗಿದ್ದು, ಲೋಕಾಯುಕ್ತದ ಅಧಿಕಾರ ಮೊಟಕುಗೊಳಿಸಿಲ್ಲ. ಲೋಕಾಯುಕ್ತ ಕಾಯ್ದೆಗೆ ಒಳಪಡುವ ದೂರುಗಳನ್ನು ಈಗಲೂ ಲೋಕಾಯುಕ್ತಕ್ಕೆ ನೀಡಬಹುದು. ಭ್ರಷ್ಟಾಚಾರ ಸಂಬಂಧಿಸಿದ ದೂರುಗಳನ್ನು ಎಸಿಬಿ ತನಿಖೆ ನಡೆಸಲಿದೆ ಎಂದು ನಿನ್ನೆ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಅವರು ಸ್ಪಷ್ಟಪಡಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics