ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಪ್ರೇರಣಾ ಟ್ರಸ್ಟ್ ಮೂಲಕ ಕಿಕ್ ಬ್ಯಾಕ್ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ ಕಣ್ಣೀರಿಟ್ಟ ಘಟನೆ ಸೋಮವಾರ ನಡೆದಿದೆ.
ಕಿಕ್ ಬ್ಯಾಕ್ ಪ್ರಕರಣ ಸಂಬಂಧ ಇಂದು ಯಡಿಯೂರಪ್ಪ ಅವರು ನಗರದ ಸಿವಿಲ್ ಕೋರ್ಟ್ ಆವರಣದಲ್ಲಿರುವ ಸಿಬಿಐ ವಿಶೇಷ ಕೋರ್ಟ್ ಮುಂದೆ ವಿಚಾರಣೆಗೆ ಹಾಜರಾದರು. ಈ ವೇಳೆ ಮಾಜಿ ಸಿಎಂ ನ್ಯಾಯಾಧೀಶರ ಹಲವು ಪ್ರಶ್ನೆಗೆ ಕಣ್ಣೀರಿಡುತ್ತಾ ಉತ್ತರಿಸಿದರು.
ನ್ಯಾಯಾಧೀಶರು ಕೇಳಿದ ಒಟ್ಟು 473 ಪ್ರಶ್ನೆಗಳಿಗೂ ಉತ್ತರಿಸಿದ ಯಡಿಯೂರಪ್ಪ, ಬಹುತೇಕ ಪ್ರಶ್ನೆಗಳಿಗೆ ಇರಬಹುದು, ಗೊತ್ತಿಲ್ಲ, ಸುಳ್ಳು, ನಿಜ ಎಂದಷ್ಟೇ ಉತ್ತರಿಸಿದರು. ಇನ್ನು ಕೆಲವು ಪ್ರಶ್ನೆಗಳಿಗೆ ವಿವರಣೆ ನೀಡಿದರು. ಆದರೆ ಕೊನೆಯಲ್ಲಿ ನ್ಯಾಯಾಧೀಶರು ಕೇಳಿದ ಪ್ರಶ್ನೆಯೊಂದಕ್ಕೆ ಗದ್ಗದಿತರಾಗಿ ಉತ್ತರಿಸಿದ ಬಿಎಸ್ ವೈ, ಇದು ರಾಜಕೀಯ ಪಿತೂರಿ, ನಾನು ಕಾನೂನು ಬಾಹಿರವಾಗಿ ಯಾರಿಗೂ ಸಹಾಯ ಮಾಡಿಲ್ಲ ಎಂದರು.
ಪ್ರಕರಣದ ಹಿನ್ನೆಲೆ: ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಿಂದಾಲ್ ಗ್ರೂಪ್‌ನ ಸೌತವೆಸ್ಟ್ ಮೈನಿಂಗ್ ಕಂಪನಿ ಗಣಿ ಪರವಾನಗಿ ಕೊಡಿಸಿದ್ದರು. ಇದರಿಂದಾಗಿ ಸೌತವೆಸ್ಟ್ ಕಂಪನಿಯು ಯಡಿಯೂರಪ್ಪ ಪುತ್ರರ ಒಡೆತನದ ಪ್ರೇರಣಾ ಟ್ರಸ್ಟ್‌ಗೆ 2006ರ ಮಾರ್ಚ್ ನಂತರ 2011ರವರೆಗೆ ಸುಮಾರು ರು. 20 ಕೋಟಿ ಸಂದಾಯ ಮಾಡಿದೆ ಎಂಬ ಆರೋಪ ಸಂಬಂಧ ಸಿಬಿಐ ಪೊಲೀಸರು ತನಿಖೆ ನಡೆಸಿದ್ದಾರೆ.