ಪ್ರಧಾನ ಸುದ್ದಿ

ಹೆಚ್ಚಿನ ಬರ ಪರಿಹಾರಕ್ಕಾಗಿ ಪ್ರಧಾನಿ ಬಳಿಗೆ ನಿಯೋಗ: ಸಿದ್ದರಾಮಯ್ಯ

Lingaraj Badiger
ಬೆಂಗಳೂರು: ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಪರಿಹಾರ ಕಾಮಗಾರಿಗಳಿಗೆ ಹೆಚ್ಚಿನ ನೆರವು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಪ್ರಧಾನಿ ಬಳಿಗೆ ನಿಯೋಗ ಕೊಂಡೊಯ್ಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ತಿಳಿಸಿದ್ದಾರೆ.
ಈಗಾಗಲೇ ಕೇಂದ್ರ ಸರ್ಕಾರ ಬರ ಪರಿಹಾರ ಕಾಮಗಾರಿಗಳಿಗೆ ನೆರವು ನೀಡಿದೆ. ಆದರೆ ರಾಜ್ಯದಲ್ಲಿ ತೀವ್ರ ಬರ ಇರುವುದರಿಂದ ಹೆಚ್ಚಿನ ನೆರವು ನೀಡುವಂತೆ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ಸಿಎಂ ಹೇಳಿದ್ದಾರೆ.
ಇಂದು ರಾಜಭವನದಲ್ಲಿ ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮುಂಗಾರು ಮಳೆ ವೈಫಲ್ಯದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 1473 ಕೋಟಿ ರು.ಗಳನ್ನು ಹಾಗೂ ಹಿಂಗಾರು ಮಳೆ ವೈಫಲ್ಯದ ಹಿನ್ನೆಲೆಯಲ್ಲಿ 723 ಕೋಟಿ ರು.ಗಳನ್ನು ನೀಡುವುದಾಗಿ ತಿಳಿಸಿದೆ ಎಂದರು.
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ಬರ ವಿಚಾರದಲ್ಲಿ ಯಡಿಯೂರಪ್ಪ ರಾಜಕಾರಣ ಮಾಡುತ್ತಿದ್ದಾರೆ. ನಾವೇನೂ ಕಾಟಾಚಾರಕ್ಕೆ ಬರ ಅಧ್ಯಯನ ನಡೆಸುತ್ತಿಲ್ಲ, ಯಡಿಯೂರಪ್ಪನವರಿಗೆ ಮಾಹಿತಿ ಕೊರತೆ ಇದೆ. ಸರಿಯಾಗಿ ತಿಳಿದುಕೊಂಡು ಮಾತನಾಡಲಿ ಎಂದು ಕಿಡಿ ಕಾರಿದರು.
ರಾಜ್ಯದಲ್ಲಿ ಬರ ಅಧ್ಯಯನಕ್ಕೆ ರಚಿಸಲಾಗಿರುವ ಸಚಿವ ಸಂಪುಟದ ಉಪ ಸಮಿತಿಗಳು ಈಗಾಗಲೇ ಒಂದು ವರದಿಯನ್ನು ನೀಡಿವೆ ಅದನ್ನು ಕೇಂದ್ರಕ್ಕೆ ಕಳುಹಿಸಿದ್ದೇವೆ ಪೂರ್ಣ ಪ್ರಮಾಣದ ವರದಿಯನ್ನು ಈ ಸಮಿತಿಗಳು ಸದ್ಯದಲ್ಲೇ ನೀಡಲಿವೆ ಎಂದರು.
ಬರ ಪರಿಹಾರ ಕಾಮಗಾರಿಗಳಿಗೆ ಬಳಕೆಯಾಗದೇ ಉಳಿದಿರುವ ಹಣವನ್ನು ವಾಪಸ್ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿಲ್ಲ, ಬಳಕೆಯಾಗದ ಹಣವನ್ನು ಬೇರೆ ಜಿಲ್ಲೆಗಳಿಗೆ ಹಂಚಿಕೆ ಮಾಡಲು ಹಣ ಮರಳಿಸುವಂತೆ ಸೂಚಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
SCROLL FOR NEXT