ಬೆಂಗಳೂರು: ಕಳೆದು ಒಂದು ತಿಂಗಳಿಂದ ತಲೆಮರೆಸಿಕೊಂಡಿದ್ದ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪ್ರತಿಕೆ ಸೋರಿಕೆ ಪ್ರಕರಣದ ಕಿಂಗ್ ಪಿನ್ ಶಿವಕುಮಾರ್ ಸ್ವಾಮಿಯನ್ನು ಬಂಧಿಸುವಲ್ಲಿ ಸಿಐಡಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.
2008ರಿಂದಲೂ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಭಾಗಿಯಾಗಿದ್ದ ಶಿವಕುಮಾರಸ್ವಾಮಿ ಅಲಿಯಾಸ್ ಗುರೂಜಿಯನ್ನು ಸಿಐಡಿ ಪೊಲೀಸರು ನಿನ್ನೆ ರಾತ್ರಿ 10.30ರ ಸುಮಾರಿಗೆ ಬಂಧಿಸಿದ್ದಾರೆ. ಅಲ್ಲದೆ ಮತ್ತೊಬ್ಬ ಪ್ರಮುಖ ಆರೋಪಿ ಹಾಗೂ ಶಿವಕುಮಾರಸ್ವಾಮಿ ಪುತ್ರ ದಿನೇಶ್ ಗಾಗಿ ಸಿಐಡಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಆರೋಪಿ ಶಿವಕುಮಾರಸ್ವಾಮಿ ಚಾಣಾಕ್ಷನಾಗಿದ್ದು, ಪದೇಪದೆ ಸ್ಥಳ ಬದಲಾಯಿಸುತ್ತಿದ್ದ, ಆದರೂ ಸಿಐಡಿ ಎಸ್ ಪಿ ಸಿರಿಗೌರಿ ನೇತೃತ್ವದ ತಂಡ ಕಿಂಗ್ ಪಿನ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಪ್ರಕರಣ ಸಂಬಂಧ ಇದುವರೆಗೆ ಶಿವಕುಮಾರ್ ಸೇರಿ 12 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಐಡಿ ಎಡಿಜಿಪಿ ಸಿ,ಎಚ್.ಪ್ರತಾಪ್ ರೆಡ್ಡಿ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ನಂದಿನಿ ಲೇಔಟು ನಿವಾಸಿಯಾಗಿರುವ ಶಿವಕುಮಾರಸ್ವಾಮಿ ಪ್ರಕರಣದ ನಂತರ ಮನೆಗೆ ಬೀಗ ಹಾಕಿ ತಮಿಳುನಾಡು, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದ.
ಪ್ರಶ್ನೆ ಪತ್ರಿಕೆ ಸೋರಿಕೆ ದಂಧೆಯು ಹಲವು ವರ್ಷಗಳಿಂದ ನಡೆಯುತ್ತಿದ್ದು, ಅದರಲ್ಲಿ ಹಲವು ಟ್ಯೂಟೋರಿಯಲ್‌ಗಳು ಹಾಗೂ ಶಿಕ್ಷಕರು ಭಾಗಿಯಾಗಿರುವ ಮಾಹಿತಿ ದೊರೆತಿದೆ, ಅದನ್ನು ಆಧರಿಸಿ ಕಾರ್ಯಾಚರಣೆ ನಡೆಸಿರುವ ಸಿಐಡಿ, ಹಲವು ಅಧಿಕಾರಿಗಳು ಮತ್ತು ಶಿಕ್ಷಕರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ.