ಬೆಂಗಳೂರು: ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಮಂಗಳವಾರ ಕಡೆಗೂ ಪೊಲೀಸರ ಬಲೆಗೆ ಬಿದ್ದಿರುವ ಕಿಂಗ್ ಪಿನ್ ಶಿವಕುಮಾರ್ ಅಲಿಯಾಸ್ ಶಿವಕುಮಾರಯ್ಯ,ಗುರೂಜಿ ಸಿಐಡಿ ಅಧಿಕಾರಿಗಳ ವಿಚಾರಣೆಗೆ ಸಹಕರಿಸುತ್ತಿಲ್ಲ.
ಕಳೆದ ಒಂದು ತಿಂಗಳಿಂದ ತಲೆ ಮರೆಸಿಕೊಂಡಿದ್ದ ಲೀಕ್ ಕಿಂಗ್ ಪಿನ್ ಶಿವಕುಮಾರಸ್ವಾಮಿಯನ್ನು ಸಿಐಡಿ ಪೊಲೀಸರು ನಿನ್ನೆ ಬನ್ನೇರುಘಟ್ಟ ರಸ್ತೆಯ ಗಾರೇಬಾವಿಪಾಳ್ಯದ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಬಂಧಿಸಿದ್ದರು. ಬಳಿಕ ಆರೋಪಿಯನ್ನು ಬೆಂಗಳೂರಿನ ವಿಶೇಷ ಕೋಕಾ ಕೋರ್ಟ್ ಮುಂದೆ ಹಾಜರುಪಡಿಸಿ, 10 ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದಾರೆ.
ಸಿಐಡಿ ವಶದಲ್ಲಿರುವ ಶಿವಕುಮಾರಸ್ವಾಯನ್ನು ನಿನ್ನೆ ರಾತ್ರಿಯಿಂದ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ ವಿಚಾರಣೆ ವೇಳೆ ಯಾವುದೇ ಮಾಹಿತಿ ನೀಡದೆ ತನಗೇನೂ ಗೊತ್ತಿಲ್ಲ ಎಂದು ಪುನರುಚ್ಚರಿಸುತ್ತಿದ್ದಾನೆ. ಅಲ್ಲದೆ ತಾನು 2013ರಿಂದಲೇ ಪ್ರಶ್ನೆ ಪತ್ರಿಕೆ ಲೀಕ್ ದಂಧೆಯಿಂದ ಹಿಂದೆ ಸರಿದಿರುವುದಾಗಿ ಹೇಳುವ ಈ ಮೂಲಕ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾನೆ ಎಂದು ಸಿಐಡಿ ಮೂಲಗಳು ತಿಳಿಸಿವೆ.