ಕೊಚ್ಚಿ: ಒಂದು ವಾರಗಳ ಹಿಂದೆ ಕೇರಳದಲ್ಲಿ ನಡೆದ ದಲಿತ ಕಾನೂನು ವಿದ್ಯಾರ್ಥಿನಿ ಜಿಶಾ ಅತ್ಯಾಚಾರ ಮತ್ತು ಹತ್ಯೆ ಒಂದು ಯೋಜಿತ ಕೃತ್ಯ ಎಂದಿರುವ ಕೇರಳ ಪೊಲೀಸರು, ಪ್ರಕರಣದ ತನಿಖೆ ಪ್ರಮುಖ ಘಟ್ಟ ತಲುಪಿದೆ ಎಂದು ಶುಕ್ರವಾರ ಹೇಳಿದ್ದಾರೆ.
ತನಿಖೆ ಪ್ರಮುಖ ಹಂತದಲ್ಲಿ ಸಾಗುತ್ತಿದ್ದು, ಅದೊಂದು ನಿಯೋಜಿತ ಹತ್ಯೆ. ಆದರೆ ಪೂರ್ವ ನಿಯೋಜಿತ ಅಲ್ಲ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಮುಖ್ಯಸ್ಥ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಕೆ.ಪದ್ಮಕುಮಾರ್ ಅವರು ಹೇಳಿದ್ದಾರೆ.
ತನಿಖೆ ಸರಿಯಾದ ರೀತಿಯಲ್ಲಿ ನಡೆಯುತ್ತಿದೆ ಎಂದಿರುವ ಪದ್ಮಕುಮಾರ್ ಅವರು, ಬಂಧಿತ ಆರೋಪಿಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಕಳೆದ ಏಪ್ರಿಲ್ 28ರಂದು ದಲಿತ ಜನಾಂಗಕ್ಕೆ ಸೇರಿದ ಕಾನೂನು ವಿದ್ಯಾರ್ಥಿನಿ ಜಿಶಾಳನ್ನು ಅತ್ಯಾಚಾರವೆಸಗಿ ಭೀಕರವಾಗಿ ಹತ್ಯೆಗೈಯಲಾಗಿತ್ತು. ಪ್ರಕರಣ ಸಂಬಂಧ ಓರ್ವ ನೆರೆಮನೆಯವನು, ಇಬ್ಬರು ವಲಸೆ ಕಾರ್ಮಿಕರು ಸೇರಿದಂತೆ ಒಟ್ಟು 12 ಆರೋಪಿಗಳನ್ನು ಬಂಧಿಸಲಾಗಿದೆ.
ಜಿಶಾಳನ್ನು ಅತ್ಯಾಚಾರವೆಸಗಿ ಆಕೆಯ ಮನೆಯಲ್ಲೇ ಹತ್ಯೆಗೈಯಲಾಗಿತ್ತು. ಜಿಶಾಳ ತಾಯಿ ರಾತ್ರಿ 8.30ಕ್ಕೆ ಮನೆಗೆ ವಾಪಸ್ ಬಂದಾಗ ಜಿಶಾ ಹತ್ಯೆಯಾಗಿರುವುದು ಬೆಳಕಿಗೆ ಬಂದಿತ್ತು. ಜಿಶಾಳ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಆಕೆಯ ದೇಹದೊಳಗೆ ಹರಿತವಾದ ಕಬ್ಬಿಣದ ರಾಡ್ ಒಂದನ್ನು ತೂರಲಾಗಿದ್ದು, ಇದರಿಂದ ಆಕೆಯ ಕರುಳು ಛಿದ್ರವಾಗಿದೆ, ತಲೆಯನ್ನು ಭಾರವಾದ ವಸ್ತುವಿನಿಂದ ಜಜ್ಜಲಾಗಿತ್ತು. ಆಕೆಯ ದೇಹದಲ್ಲಿ 30 ಗಾಯಗಳಾಗಿದ್ದು, ಎದೆ ಭಾಗದಲ್ಲಿ ಇರಿದ ಆಳವಾದ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos