ಪಾಟ್ನಾ: ಕಾರನ್ನು ಓವರ್‌ಟೇಕ್ ಮಾಡಿದ್ದಕ್ಕಾಗಿ ಯುವಕನೊಬ್ಬನನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಜೆಡಿಯು ರಾಜಕಾರಣಿಯ ಮಗ ರಾಕಿ ಯಾದವ್ ತಪ್ಪೊಪ್ಪಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ತಲೆಮರೆಸಿಕೊಂಡಿದ್ದ ಜೆಡಿಯು ಎಂಎಲ್ ಸಿ ಮನೋರಮಾ ದೇವಿ ಪುತ್ರ ರಾಕಿ ಯಾದವ್ ಅವರನ್ನು ಇಂದು ಬುದ್ಧಗಯಾದಲ್ಲಿ ಬಂಧಿಸಿದ ಪೋಲೀಸರು, ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ರಾಕಿ ಯಾದವ್ ಗುಂಡಿಕ್ಕಿ ಹತ್ಯೆಗೈದ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆಂದು ಹೇಳಲಾಗಿದೆ.
ನಿನ್ನೆ ರಾಕಿ ಅಂಗರಕ್ಷಕನನ್ನು ಬಂಧಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ ರಾಕಿ ಯಾದವ್ ನನ್ನು ಪೊಲೀಸರು ಬಂಧಿಸಿದ್ದರು. ಯುವಕನನ್ನು ಗುಂಡಿಕ್ಕಿ ಹತ್ಯೆಗೈದ ನಂತರ ಪರಾರಿಯಾಗಿದ್ದ ರಾಕಿ ಗಯಾದಿಂದ 15 ಕಿ.ಮೀ ದೂರದಲ್ಲಿರುವ ಬುಧ್ಧಗಯಾದಲ್ಲಿರುವ ತಂದೆಯ ನಿವಾಸದಲ್ಲಿ ಅವಿತಿದ್ದನು.
ಬಿಹಾರದ ಖ್ಯಾತ ಉದ್ಯಮಿಯೊಬ್ಬರ 19ರ ಹರೆಯದ ಮಗ ಆದಿತ್ಯ ಸಚ್‌ದೇವ ಗುಂಡಿಗೆ ಬಲಿಯಾದ ದುರ್ದೈವಿ. ಈಗಷ್ಟೇ 12 ನೇ ತರಗತಿಯ ಪರೀಕ್ಷೆ ಮುಗಿಸಿದ್ದ ಆದಿತ್ಯ, ತನ್ನ ಗೆಳೆಯರೊಂದಿಗೆ ಪ್ರಯಾಣಿಸುತ್ತಿದ್ದ ವೇಳೆ ಜೆಡಿಯು ನಾಯಕಿ ಮನೋರಮಾ ದೇವಿ ಅವರಿಗೆ ಸೇರಿದ ರೇಂಜ್ ರೋವರ್‌ನ್ನು ಆದಿತ್ಯನ ಕಾರು ಓವರ್‌ಟೇಕ್ ಮಾಡಿತ್ತು. ಮನೋರಮಾ ದೇವಿ ಅವರು ಬಿಹಾರದ ವಿಧಾನ ಪರಿಷತ್ತಿನ ಸದಸ್ಯರಾಗಿದ್ದು,ಅವರ ಪತಿ ಬಿಂದಿ ಯಾದವ್ ಕುಖ್ಯಾತ ಗೂಂಡಾ ಆಗಿದ್ದಾನೆ.