ಹೈದರಾಬಾದ್: ಹಾವುಗಳನ್ನು ತೋರಿಸಿ, ಹೆದರಿಸಿ ಅತ್ಯಾಚಾರ ಎಸಗಿದ ಆರೋಪ ಸೇರಿದಂತ ಹಲವು ಅಪರಾಧಗಳಲ್ಲಿ ಭಾಗಿಯಾಗಿದ್ದ 'ಸ್ನೇಕ್ ಗ್ಯಾಂಗ್' ನ ಏಳು ಸದಸ್ಯರಿಗೆ ಬುಧವಾರ ತೆಲಂಗಾಣದ ರಂಗಾರೆಡ್ಡಿ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ
ಪ್ರಮುಖ ಆರೋಪಿ ಜಿಮ್ ತರಬೇತುದಾರ ಫೈಸಲ್ ದಯಾನಿ ಮತ್ತು ಇತರರು ದರೋಡೆ ಪ್ರಕರಣಗಳಲ್ಲಿ ತಪ್ಪಿತಸ್ಥರು ಎಂದು ಮಂಗಳವಾರ ತೀರ್ಪು ನೀಡಿದ್ದ ಕೋರ್ಟ್, ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿತ್ತು. ಇಂದು ಶಿಕ್ಷೆ ಪ್ರಮಾಣ ಪ್ರಕಟಿಸಿದ ಜಿಲ್ಲಾ ನ್ಯಾಯಾಲಯ, ಫೈಸಲ್ ದಯಾನಿ ಹಾಗೂ ಇತರೆ ಆರು ಮಂದಿಗೆ ಜೀವಾವಧಿ ಶಿಕ್ಷೆ, ಮತ್ತೊಬ್ಬನಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.
2014ರ ಜುಲೈ 31 ರಂದು ಪಹಡಿಶರೀಫ್ ಪೊಲೀಸ್ ಠಾಣೆ ವ್ಯಾಪ್ತಿಯ ಫಾರ್ಮ್‌ಹೌಸ್‌ವೊಂದಕ್ಕೆ ನುಗ್ಗಿದ ಸ್ನೇಕ್ ಗ್ಯಾಂಗ್ ಯುವತಿಗೆ ಹಾವನ್ನು ತೋರಿಸಿ ಬೆದರಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ ಸಂತ್ರಸ್ತೆ ತನ್ನ ಹೇಳಿಕೆಯನ್ನು ಹಿಂಪಡೆದಿದ್ದರಿಂದ ಹಾಗೂ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಗ್ಯಾಂಗ್ ರೇಪ್ ಆರೋಪ ಸಾಬೀತಾಗಿಲ್ಲ.
ಹಣ ವಸೂಲಿ ಮತ್ತು ವಿವಾದಗಳನ್ನು ಬಗೆಹರಿಸುವ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ಈ ಗ್ಯಾಂಗ್ ಸಂತ್ರಸ್ತರನ್ನು ಬೆದರಿಸಲು ಹಾವುಗಳನ್ನು ಉಪಯೋಗಿಸುತ್ತಿತ್ತು. ಇವರಿಂದ ೪ ಕುದುರೆಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದ್ದು, ಪ್ರಾಣಿಗಳ ಮೇಲೆ ಹಿಂಸೆಯ ಪ್ರಕರಣವನ್ನು ಕೂಡ ದಾಖಲಿಸಿಕೊಂಡಿದ್ದರು.