ಬೆಂಗಳೂರು: ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಸಿಐಡಿ ಪೊಲೀಸರು ಮತ್ತೋರ್ವ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.
ಇಂದು ತುಮಕೂರಿನಲ್ಲಿ ಮಲ್ಲಯ್ಯ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿ ಪ್ರಕರಣದ ಕಿಂಗ್‌ಪಿನ್ ಶಿವಕುಮಾರಯ್ಯ ಅಲಿಯಾಸ್ ಗುರೂಜಿಯ ನಿಕಟವರ್ತಿ ಎನ್ನಲಾಗಿದೆ.
ಆರೋಪಿ ಮಲ್ಲಯ್ಯ ತಂದೆ ಹಿರೇಮಲ್ಲಯ್ಯ ಕೂಡ ಪೇಪರ್ ಲೀಕ್ ಪ್ರಕರಣದ ಆರೋಪಿಯಾಗಿದ್ದು, 2012 ರಲ್ಲಿ ಶಿವಕುಮಾರಯ್ಯ ಜೊತೆ ಸೇರಿಕೊಂಡು ಪೇಪರ್ ಲೀಕ್ ದಂಧೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಶಿವಕುಮಾರಯ್ಯನ ಸಹೋದರನ ಪುತ್ರ ಕುಮಾರಸ್ವಾಮಿ ಅಲಿಯಾಸ್ ಕಿರಣ್ ಎಂಬಾತ ಸಿಐಡಿ ಬಲೆಗೆ ಬಿದ್ದ ಬೆನ್ನಲ್ಲೇ ಇದೀಗ ಪ್ರಶ್ನೆ ಪತ್ರಿಕೆ ಸೋರಿಕೆಯ ಮೂಲ ಕೇಂದ್ರ ಹಾವೇರಿ ಜಿಲ್ಲೆಯ ಹಾನಗಲ್ ಟ್ರಜರಿ ಎನ್ನುವ ವಿಚಾರಬಹಿರಂಗವಾಗಿತ್ತು.